ದೇವಾಪುರದ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು


ಸುರಪುರ:ತಾಲೂಕಿನ ದೇವಾಪುರ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ 10 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ನಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಘಟನೆ ಸೋಮವಾರ ನಡೆದಿದೆ.

ಬೆಳಗಿನ ಉಪಹಾರ ಸೇವಿಸಿದ ಬಳಿಕ ಇಬ್ಬರು ವಿದ್ಯಾರ್ಥಿನಿಯರು ಕುಸಿದು ಬಿದ್ದಿದ್ದಾರೆ. ಕೆಲ ಸಮಯದ ನಂತರ ಕೆಲವರಿಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ. ಗ್ರಾಮಸ್ಥರು ವಿದ್ಯಾರ್ಥಿನಿಯರನ್ನು ಸುರಪುರದ ಸರಕಾರಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲಿಸಿದ್ದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ನಂತರ ಅವರು ಪತ್ರಕರ್ತರ ಜತೆ ಮಾತನಾಡಿ, ಇಬ್ಬರು ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಉಳಿದ 8 ಜನರು ಆರೋಗ್ಯವಾಗಿದ್ದಾರೆ. ಎಲ್ಲರಿಗೂ ಚಿಕಿತ್ಸೆ ಕೊಡಲಾಗಿದೆ. ಸಂಜೆ ವೇಳೆಗೆ ಎಲ್ಲರನ್ನು ಕಳುಹಿಸಿ ಕೊಡುವುದಾಗಿ ತಿಳಿಸಿದರು. ಇದು ವಾಂತಿ, ಭೇದಿ ಪ್ರಕರಣವಲ್ಲ. ಕುಡಿಯುವ ನೀರು ಮತ್ತು ಮಾಡಿದ ಅಡುಗೆಯನ್ನು ತಪಾಸಣೆಗೆ ಕಳುಹಿಸಲಾಗುವುದು ವರದಿ ಬಂದ ನಂತರವೇ ಸತ್ಯಾಂಶ ಗೊತ್ತಾಗಲಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪಾರಡ್ಡಿ ಮಾಲಿಪಾಟೀಲ್, ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!