ಮತಪಟ್ಟಿ ಹೆಸರು ನೋಂದಣಿ ಆರಂಭ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಮತದಾರರ ಪಟ್ಟಿ ಸಿದ್ದತೆ ಕಾರ್ಯ ಆರಂಭಗೊಂಡಿದ. ಮತ ಪಟ್ಟಿಗೆ ಹೆಸರು ನೋಂದಣಿಗೆ ನ.6 ಕೊನೆ ದಿನವಾಗಿದೆ ಎಂದು ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ತಹಸೀಲ್ದಾರ ಹೆಚ್.ಎ.ಸರಕಾವಸ್ ತಿಳಿಸಿದ್ದಾರೆ.
ನಗರದ ತಹಸೀಲ್ದಾರ ಕಚೇರಿಯಲ್ಲಿ ಮಾತನಾಡಿದ ಅವರು, 2025ರ ನ.6ರವರೆಗೆ ನಮೂನೆ-19 ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಕರಡು ಪಟ್ಟಿ ನ.25ರಂದು ಪ್ರಕಟಗೊಳ್ಳಲಿದೆ. ನ.25ರಿಂದ ಡಿ.10ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಾಗಿ ಸಮಯ ನೀಡಲಾಗಿದೆ. ಅಂತಿಮ ಪಟ್ಟಿ ಡಿ. 30ರಂದು ಪ್ರಕಟವಾಗಲಿದೆ ಎಂದರು.
2025ರ ನವೆಂಬರ್ ವೇಳೆಗೆ ಮುನ್ನ ಇರುವ ಆರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿನ ಮಾನ್ಯತೆ ಪಡೆದ ಪ್ರೌಢಶಾಲಾ ಅಥವಾ ಅದಕ್ಕಿಂತ ಮೇಲಿನ ಹಂತದ ಶಿಕ್ಷಣ ಸಂಸ್ಥೆಯಲ್ಲಿ ಕನಿಷ್ಠ ಮೂರು ವರ್ಷ ಬೋಧಕರಾಗಿರಬೇಕು.ನಮೂನೆ-19 ಜತೆಗೆ ಬೋಧಕರಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯ ಅನುಬಂಧ-2, ಮತದಾರರ ಗುರುತಿನ ಚೀಟಿ ಹಾಗೂ ಆರ್ಧಾ ಕಾರ್ಡ್ ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಕೆ ಅಗತ್ಯ ಎಂದರು.
ಮೂರು ವರ್ಷಗಳಲ್ಲಿ ವಿವಿಧ ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ ಬೋಧನಾ ಸೇವೆ ಸಲ್ಲಿಸಿರುವವರು ಪ್ರತಿ ಸಂಸ್ಥೆಯಿಂದಲೂ ಪ್ರತ್ಯೇಕ ಅನುಬಂಧ-2 ಪಡೆಯಬೇಕು. ಆದರೆ, ಅತಿಥಿ ಶಿಕ್ಷಕರಿಗೆ ಈ ಬಾರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂದರು. ಹೆಚ್ಚಿನ ಮಾಹಿತಿಗಾಗಿ ಹಾಗೂ ನಮೂನೆ-19 ಪಡೆಯಲು ಕೆಲಸದ ಅವಧಿಯಲ್ಲಿ ಸುರಪುರ ತಹಸೀಲ್ದಾರ ಕಚೇರಿಯ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಇಓ ಬಸವರಾಜ ಸಜ್ಜನ ಮತ್ತು ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಯಲಪ್ಪ ಕಾಡ್ಲೂರ ಸಾಮಾಜಿಕ ಶೈಕ್ಷಣಿಕ ಗಣಿತಿ ನೋಡಲ್ ಅಧಿಕಾರಿ ಶರಣ ಬಸವ ಗಚ್ಚಿ ಸೇರಿದಂತೆ ಉಪಸ್ಥಿತರಿದ್ದರು.



