ಸಮರ್ಪಕ ಮಾಹಿತಿ ನೀಡುವಲ್ಲಿ ಅಧಿಕಾರಿಗಳಿಂದ ಬೇಜವಾಬ್ದಾರಿ ವರ್ತನೆ; ಸಾಮಾಜಿಕ ಹೋರಾಟಗಾರ ಜೆಜಿ ಆರೋಪ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಮಾಹಿತಿ ನೀಡುವಲ್ಲಿ ತಹಸೀಲ್ ಕಚೇರಿ ಮತ್ತು ನಗರಸಭೆಯ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದು ನಿರ್ಲಕ್ಷ್ಯ ಧೋರಣೆ ಮುಂದುವರೆಸಿದ್ದಾರೆ ಎಂದು ಪುರಸಭೆ ಮಾಜಿ ಸದಸ್ಯ ಮತ್ತು ಸಾಮಾಜಿಕ ಹೋರಾಟಗಾರ ರಾಜಾ ರಾಮಪ್ಪ ನಾಯಕ (ಜೆಜೆ) ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿಯ ವಿವಿಧ ಇಲಾಖೆಯ ಅಧಿಕಾರಿಗಳ ವೈಫಲ್ಯ ಎದ್ದು ಕಾಣುತ್ತಿದೆ. ಹೋರಾಟಗಾರರು ಅನೇಕ ಬಾರಿ ಕೆಲವು ದಾಖಲಾತಿಗಳನ್ನು ಮಾಹಿತಿ ಹಕ್ಕುನಲ್ಲಿ ಸಲ್ಲಿಸಿದರು ಸಹ ತಹಸಿಲ್ ಮತ್ತು ನಗರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಾವು ದೂರವಾಣಿ ಮೂಲಕ ಸಂಪರ್ಕಿಸಿದರೂ ನನ್ನ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಲಿಸ್ಟ್ನಲ್ಲಿ ಹಾಕಿದ್ದಾರೆ ಎಂದು ದೂರಿದರು.
ನಗರಸಭೆಯ ಅಧಿಕಾರಿಗಳ ಪ್ರತಿದಿನ ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜಿರಾಗುವುದಿಲ್ಲ. ನಗರಸಭೆ ವ್ಯಾಪ್ತಿಯ ಮೂಲಸೌಕರ್ಯಗಳ ಪರಿಶೀಲಿಸುತ್ತಿಲ್ಲ. ಮೂಲಸ್ಥಾನದಲ್ಲಿ (ಹೆಡ್ ಕ್ವಾಟರ್) ವಾಸಿಸುತ್ತಿಲ್ಲ. ದಿನಂಪತ್ರಿ ಮಧ್ಯಾಹ್ನದ ಹೊತ್ತಿಗೆ ಕಚೇರಿಗೆ ಆಗಮಿಸುತ್ತಾರೆ. ನಗರದಲ್ಲಿ ಯಾರು ಕೆಲಸ ಮಾಡುತ್ತಿದ್ದಾರೆ, ಪ್ರಗತಿ ಹೇಗಿದೆ ಎಂಬುವುದನ್ನು ಪರಿಶೀಲಿಸುವ ಗೋಜಿಗೆ ಹೋಗುತ್ತಿಲ್ಲ. ಪ್ರತಿಯೊಂದು ವಿಷಯದಲ್ಲಿ ನಿಷ್ಕಾಳಜಿ ಪ್ರದರ್ಶಿಸುತ್ತಿದ್ದಾರೆ ಎಂದು ಹರಿಹಾಯ್ದರು.
ರಂಗಂಪೇಟೆಯ ಮಹಿಳಾ ಶೌಚಾಲಯ ಮತ್ತು ರಂಗಂಪೇಟೆ ರಸ್ತೆಯ ತಡೆಗೋಡೆ ನಿರ್ಮಾಣದ ಕುರಿತಂತೆ ದಾಖಲಾತಿ ಕೊಡಿ ಎಂದು ಮಾಹಿತಿ ಕೇಳುತ್ತಿದ್ದರು ನಗರಸಭೆಯವರು ಕೊಡುತ್ತಿಲ್ಲ. ಮಾಹಿತಿ ಹಕ್ಕು ಅವಧಿ ಮುಗಿದು ಹೋಗಿದೆ. ನಗರದಲ್ಲಿ ಎಷ್ಟೋ ನಿರ್ಮಾಣ ಕಾಮಗಾರಿಗಳು ಪರವಾನಿಗೆ ಪಡೆಯದೆ ನಡೆಯುತ್ತಿವೆ. ಇದರಿಂದ ನಗರಸಭೆ ಆದಾಯ ನಿಂತು ಹೋಗಿದೆ. ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಿಳಿಸಬೇಕೆಂದರೆ ಅವರು ಸಹ ಕರೆ ಸ್ವೀಕರಿಸದೆ ಹೋರಾಟಗಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಹಾಗಾದರೆ ನಾವು ಯಾರಿಗೆ ಕೇಳಬೇಕು ಎಂದು ಪ್ರಶ್ನೀಸಿದರು.
ರಂಗಂಪೇಟೆಯ ಮಹಿಳಾ ಶೌಚಾಲಯ ಮತ್ತು ತಡೆಗೋಡೆ ವಿಷಯದಲ್ಲಿ ರಾಜೀಯ ಪ್ರಶ್ನೇ ಉದ್ಭವಿಸುವುದಿಲ್ಲ. ನನ್ನ ಹೋರಾಟ ನಿಲ್ಲದು ಮುಂದುವರಿಯಲಿದೆ. ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಕೂಡದು. ಅಧಿಕಾರಿಗಳು ಮೂಲಸ್ಥಾನದಲ್ಲಿದ್ದು ಕೆಲಸ ಮಾಡಬೇಕು. ನಗರದ ಸಮಸ್ಯೆಗಳನ್ನು ಪರಿಶೀಲಿಸಬೇಕು. ಕೇಳಿದ ದಾಖಲಾತಿಗಳಿಗೆ ಮಾಹಿತಿ ಒದಗಿಸಬೇಕು. ಇಲ್ಲವಾದಲ್ಲಿ ಶೀಘ್ರದಲ್ಲಿಯೇ ಸಾಮೂಹಿಕ ಸಂಘಟನೆಗಳ ನೇತೃತ್ವದಲ್ಲಿ ನಗರಸಭೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.




