ಸುಗ್ಗಿ ಹಬ್ಬ ಸಂಕ್ರಾಂತಿಯ ಸಂಭ್ರಮ | ಜಗದ್ಗರು ಶ್ರೀ ಮೌನೇಶ್ವರರ ದರ್ಶನಕ್ಕೆ ಜನಸಾಗರ,ಕೃಷ್ಣೆಯ ತಟದಲ್ಲಿ ಮಕರ ಸಂಕ್ರಾಂತಿಯ ಪುಣ್ಯಸ್ನಾನ
ಸುರಪುರ ಟೈಮ್ಸ್ ವಾರ್ತೆ
ಸುರಪುರ ;ಮಕರ ಸಂಕ್ರಮಣ ದಿನದಂದು ನದಿ ಸ್ನಾನ ಮಾಡಿದರೆ ಪಾಪ, ಕರ್ಮಗಳೆಲ್ಲವೂ ತೊಳೆದು ಹೋಗಿ ನಿತ್ಯದ ಜೀವನದಲ್ಲಿ ನೆಮ್ಮದಿ, ಬೆಳಕು ಕಾಣುತ್ತದೆ ಎನ್ನುವುದು ನಮ್ಮ ದೇಶದ ಜನರ ಧಾರ್ಮಿಕ ಸಂಪ್ರದಾಯ. ಅದರಂತೆ ಹೊಸ ವರ್ಷದ ಮೊದಲ ಹಬ್ಬವಾದ ಸಂಕ್ರಮಣವನ್ನು ಗುರುವಾರ ಶ್ರದ್ಧಾ-ಭಕ್ತಿಯೊಂದಿಗೆ ಆಚರಿಸಲಾಯಿತು.
ತಾಲೂಕಿನ ತಿಂಥಣಿ ಸಮೀಪ ಹರಿಯುವ ಕೃಷ್ಣಾ ನದಿ ಪಾತ್ರದಲ್ಲಿ ಯುವಕ-ಯುವತಿಯರು, ಕಿರಿಯರು-ಹಿರಿಯರು ಪುಣ್ಯಸ್ನಾನ ಮಾಡಿದರು. ನದಿ ತಟದಲ್ಲಿ ಜನಜಾತ್ರೆಯೇ ನೆರದಿತ್ತು. ಕೃಷ್ಣೆಯಲ್ಲಿ ಮಿಂದೆದ್ದು, ನಂತರ ಗಂಗಾ ಪೂಜೆ, ಸೂರ್ಯ ನಮಸ್ಕಾರ ಮಾಡಿ ಉತ್ತರಾಯಣ ಕಾಲ ನಮ್ಮೆಲ್ಲಾ ಸಂಕಷ್ಟಗಳನ್ನು ನೀಗಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಬಳಿಕ ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ತೆರಳಿ ಸರದಿ ಸಲಿನಲ್ಲಿ ನಿಂತು ದೇವರ ದರ್ಶನ ಪಡೆದು ಸುಖ, ಶಾಂತಿ, ನೆಮ್ಮದಿ ಜೀವನಕ್ಕೆ ಪ್ರಾರ್ಥಿಸಿದರು.
ಕಲಬುರಗಿ, ಯಾದಗಿರಿ, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ ಜಿಲ್ಲೆಗಳು ಸೇರಿ ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ್ದ ಭಾರಿ ಸಂಖ್ಯೆಯ ಜನರು ದೇವಸ್ಥಾನಕ್ಕೆ ಭೇಟಿಯಿತ್ತು ಪೂಜೆ ಸಲ್ಲಿಸಿದರು. ದೇವಸ್ಥಾನದ ಆವರಣದಲ್ಲಿ ಜಾತ್ರೆಯ ಸ್ಥಿತಿ ನಿರ್ಮಾಣವಾಗಿತ್ತು. ನದಿ ದಡದ ಬಲಭಾಗದಲ್ಲಿರುವ ವೀರಗೋಟಕ್ಕೂ ಜನರು ತೆಪ್ಪದಲ್ಲಿ ತೆರಳಿ ಶ್ರೀ ಆದಿ ಮೌನಲಿಂಗೇಶ್ವರನ ದರ್ಶನ ಪಡೆದರು. ನಂತರ ನದಿ ತಟದಲ್ಲಿ ಕುಟುಂಬ, ಸ್ನೇಹಿತರೊಂದಿಗೆ ಹಬ್ಬದ ನಾನಾ ಬಗೆಯ ರುಚಿ ರುಚಿಯಾದ ಅಡುಗೆಯ ಭರ್ಜರಿ ಭೋಜನ ಮಾಡಿದರು.
ನದಿ ಮತ್ತು ದೇವಸ್ಥಾನದ ಮುಂಭಾಗದಲ್ಲಿ ಭಜಿ, ಜಿಲೇಬಿ, ಮೈಸೂರು ಪಾಕ್ ಮಿಠಾಯಿಗಳ, ಆಟಿಕೆ ವಸ್ತು, ಬಳೆ ಅಂಗಡಿಗಳ ಮತ್ತು ಕಡಲೆ ಕಾಯಿ, ಕಬ್ಬಿನ ಹಾಲಿನ ವ್ಯಾಪಾರ ಭರ್ಜರಿಯಾಗಿತ್ತು. ಒಟ್ಟಾರೆ ಸೂರ್ಯ ತನ್ನ ಪ್ರಯಾಣವನ್ನು ಉತ್ತರ ದಿಕ್ಕಿನೆಡೆಗೆ ಆರಂಭಿಸುವ ಶುಭ ಸಂದರ್ಭ ಆಚರಿಸುವ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಂಪ್ರದಾಯಿಕ ಪೂಜೆ, ಪುನಸ್ಕಾರ, ದೇವಸ್ಥಾನಕ್ಕೆ ಭೇಟಿ, ವಿಶೇಷ ಭೋಜನ, ಎಳ್ಳು, ಬೆಲ್ಲ ವಿನಿಮಯ ಮೂಲಕ ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು.
ಹಣ್ಣು ಎರೆಯುವ ಸಂಭ್ರಮ
ಋತು ಬದಲಾಗುವ ಸಂಕ್ರಾಂತಿ ವೇಳೆ ಮಕ್ಕಳು ಆರೋಗ್ಯವಾಗಿರಲಿ ಎಂಬ ಹರಕೆಯೊಂದಿಗೆ ಚಿಕ್ಕಮಕ್ಕಳಿಗೆ ಹಣ್ಣೆರೆಯುವ ಸಂಪ್ರದಾಯ ಹಿಂದಿನಿಂದಲೂ ಇದೆ. ಸಂಕ್ರಾತಿ ಸಂಜೆ ಒಂದು ಸೇರಿನಲ್ಲಿ ಬಾಳೆಹಣ್ಣು ತುಣುಕು, ಬೋರೆಹಣ್ಣು, ಕಬ್ಬಿನ ತುಂಡು, ಕಡಲೆಕಾಯಿ, ಬತ್ತಾಸು, ಬೆಲ್ಲದ ತುಂಡುಗಳನ್ನು ಮತ್ತು 1,2,5ರೂ. ನಾಣ್ಯಗಳನ್ನು ಹಾಕಿ ಮಕ್ಕಳ ಮೇಲೆ ಸುರಿದು ಆಶೀರ್ವದಿಸುತ್ತಾರೆ. ಈ ವೇಳೆ ನೆರೆಹೊರೆಯವರನ್ನು ಆಹ್ವಾನಿಸಿ, ಮಕ್ಕಳಿಗೆ ಹೂಮಾಲೆ ಹಾಕಿ, ಆರತಿ ಬೆಳಗಿ ತಾಯಿ ಸಂಭ್ರಮವನ್ನು ಆಚರಿಸುತ್ತಾಳೆ. ಇಂತಹ ಗ್ರಾಮ ಸಂಪ್ರದಾಯ ಇನ್ನೂ ಜೀವಂತವಾಗಿದ್ದು ಗುರುವಾರದ ಸಂಕ್ರಮಣ ಹಬ್ಬದಲ್ಲಿ ಕಂಡುಬಂತು.
ಎಳ್ಳು-ಬೆಲ್ಲ ಹಂಚಿ ಸಂಭ್ರಮ
ನಗರದಲ್ಲಿಯೂ ಬೆಳಗ್ಗೆ ಸೂರ್ಯೋದಯಕ್ಕೆ ಮುಂಚೆ ಎದ್ದು, ಎಳ್ಳಿನ ಪುಡಿಯನ್ನು ಮೈಗೆ ಸವರಿಕೊಂಡು ಅಭ್ಯಂಜನ ಸ್ನಾನ ಮಾಡಿದರು. ಕುಟುಂಬ ಸದಸ್ಯರೊಂದಿಗೆ ದೇವಾಲಯಗಳಿಗೆ ಆಗಮಿಸಿದ ಮಹಿಳೆಯರು, ಯುವತಿಯರು ಹಾಗೂ ಮಕ್ಕಳು ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ವರ್ಷವಿಡೀ ಸುಖ, ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಿದರು. ಮುಸ್ಸಂಜೆಯಲ್ಲಿ ಮಹಿಳೆಯರು, ಮಕ್ಕಳು ತಮ್ಮ ಬಂಧುಗಳ, ಸ್ನೇಹಿತರ, ಪರಿಚಿತರ ಮನೆಗಳಿಗೆ ತೆರಳಿ ಸಂಕ್ರಾಂತಿ ಶುಭಾಶಯ ಸಲ್ಲಿಸಿ ಪರಸ್ಪರ ಎಳ್ಳು-ಬೆಲ್ಲ ಹಂಚಿ ಚೆನ್ನಾಗಿರೋಣ ಎಂದು ಶುಭಹಾರೈಸಿ ಸಂಕ್ರಾತಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿದರು.










