ಗೋಡಿಹಾಳದಲ್ಲಿ ಜಾನುವಾರು ಆರೋಗ್ಯ ಶಿಬಿರ ಯಶಸ್ವಿ – ರೈತರಿಗೆ ಹೈನುಗಾರಿಕೆ ಬಗ್ಗೆ ಜಾಗೃತಿ| 40ಕ್ಕೂ ಹೆಚ್ಚು ಜಾನುವಾರುಗಳಿಗೆ ಚಿಕಿತ್ಸೆ – ಕರುಗಳಿಗೆ ಜಂತುನಿವಾರಕ ಲಸಿಕೆ, ಪಶು ಆಹಾರ ವಿತರಣೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುರಪುರ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ಜಾನುವಾರು ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ಗ್ರಾಮೀಣ ರೈತರ ಹಿತದೃಷ್ಟಿಯಿಂದ ಆಯೋಜಿಸಲಾದ ಈ ಶಿಬಿರಕ್ಕೆ ಉತ್ತಮ ಸ್ಪಂದನೆ ದೊರಕಿತು.
ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಡಾ. ಪರ್ವತ ರೆಡ್ಡಿ ಅವರು ಗ್ರಾಮದ ಸುಮಾರು 40ಕ್ಕೂ ಹೆಚ್ಚು ಎಮ್ಮೆ ಹಾಗೂ ಆಕಳುಗಳಿಗೆ ಆರೋಗ್ಯ ಪರಿಶೀಲನೆ ನಡೆಸಿ ಅಗತ್ಯ ಚಿಕಿತ್ಸೆ ನೀಡಿದರು. ವಿವಿಧ ರೋಗಗಳಿಂದ ಬಳಲುತ್ತಿದ್ದ ಜಾನುವಾರುಗಳಿಗೆ ಔಷಧೋಪಚಾರ ಮಾಡಲಾಗಿದ್ದು, ಆರೋಗ್ಯದ ಕುರಿತು ರೈತರಿಗೆ ವಿವರವಾದ ಮಾಹಿತಿ ನೀಡಲಾಯಿತು.

ಇದರ ಜೊತೆಗೆ ಕರುಗಳಿಗೆ ಜಂತುನಿವಾರಕ ಲಸಿಕೆ ಹಾಕಲಾಗಿದ್ದು, ದನ-ಕರುಗಳ ಉತ್ತಮ ಬೆಳವಣಿಗೆಯಿಗಾಗಿ ಪಶು ಆಹಾರವಾದ ಮಿನರಲ್ ಮಿಕ್ಸರ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪರ್ವತ ರೆಡ್ಡಿ ಅವರು, ರೈತರು ಹೈನುಗಾರಿಕೆಯನ್ನು ಲಾಭದಾಯಕವಾಗಿ ರೂಪಿಸಿಕೊಳ್ಳಲು ಜಾನುವಾರುಗಳ ಆರೈಕೆಯಲ್ಲಿ ಹೆಚ್ಚಿನ ಗಮನ ಹರಿಸಬೇಕು. ನಿಯಮಿತವಾಗಿ ಲಸಿಕೆ ಹಾಕಿಸುವುದು, ಶುದ್ಧ ಆಹಾರ ನೀಡುವುದು ಹಾಗೂ ಕರುಗಳಿಗೆ ಜಂತು ತಗುಲದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಸಲಹೆ ನೀಡಿದರು.
ಇಂತಹ ಆರೋಗ್ಯ ಶಿಬಿರಗಳು ಗ್ರಾಮೀಣ ಪ್ರದೇಶದ ರೈತರಿಗೆ ಬಹಳ ಉಪಯುಕ್ತವಾಗಿದ್ದು, ಜಾನುವಾರುಗಳ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ ಎಂದು ರೈತರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ವಿನೋದ್, ಪಶು ಇಲಾಖೆಯ ಸಿಬ್ಬಂದಿ, ಯೋಜನೆಯ ಕಾರ್ಯಕರ್ತರು ಹಾಗೂ ಗ್ರಾಮದ ಅನೇಕ ರೈತರು ಉಪಸ್ಥಿತರಿದ್ದರು.


