ರಂಜಾನ್ ಹಬ್ಬ: ಸುರಪುರ ಈದ್ಗಾದಲ್ಲಿ ಶಾಂತಿ–ಸೌಹಾರ್ದದ ಸಂದೇಶ|ಸಾಮೂಹಿಕ ನಮಾಜ್, ದುವಾ ಮೂಲಕ ಮನುಕುಲದ ಒಳಿತಿಗೆ ಪ್ರಾರ್ಥನೆ.
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಶಾಂತಿ, ಸಹನೆ ಹಾಗೂ ಭಾತೃತ್ವದ ಸಂಕೇತವಾದ ಪವಿತ್ರ ಈದ್ ಉಲ್ ಫಿತರ್ (ರಂಜಾನ್) ಹಬ್ಬವನ್ನು ನಗರದ ಮುಸ್ಲಿಂ ಬಾಂಧವರು ಶ್ರದ್ಧಾ-ಭಕ್ತಿಯೊಂದಿಗೆ ಸಂಭ್ರಮದಿಂದ ಆಚರಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಹಬ್ಬದ ಪ್ರಯುಕ್ತ ನಡೆದ ಸಾಮೂಹಿಕ ನಮಾಜ್‌ಗೆ ನಗರದ ವಿವಿಧ ಮಸೀದಿಗಳಿಂದ ಹಾಗೂ ಸುತ್ತಲಿನ ಗ್ರಾಮಗಳಿಂದ ಭಕ್ತರು ಹೊಸ ಬಟ್ಟೆಗಳನ್ನು ಧರಿಸಿಕೊಂಡು ತಂಡೋಪ ತಂಡವಾಗಿ ಆಗಮಿಸಿ ಅಲ್ಲಾಹನ ನಾಮಸ್ಮರಣೆ ಮಾಡಿದರು.
ಈದ್ಗಾ ಮೈದಾನದಲ್ಲಿ ಹಾಫೀಸ್ ಅಕ್ಬರ್ ಅಲಿ ಗೋಗಿ ಅವರು ಪ್ರಾರ್ಥನೆ ನೆರವೇರಿಸಿ ಬಳಿಕ ಸಂದೇಶ ನೀಡಿದರು. ರಂಜಾನ್ ಮಾಸವು ಉಪವಾಸದ ಮೂಲಕ ಮನುಷ್ಯನಲ್ಲಿ ತಾಳ್ಮೆ, ಸಂಯಮ ಬೆಳೆಸುತ್ತದೆ. ಉಪವಾಸವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿಗೆ ಸಹಾಯಕವಾಗುತ್ತದೆ ಎಂದು ಹೇಳಿದರು. ಸಮಾಜದಲ್ಲಿ ಪರಸ್ಪರ ಸೌಹಾರ್ದ, ಪ್ರೀತಿ ಹಾಗೂ ಸಹಕಾರ ಬೆಳೆದು ಮನುಕುಲದ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ನಮಾಜ್ ನಂತರ ಮನುಕುಲದ ಕಲ್ಯಾಣಕ್ಕಾಗಿ ದುವಾ ಸಲ್ಲಿಸಲಾಯಿತು. ಬಳಿಕ ಚಿಕ್ಕಮಕ್ಕಳು, ಯುವಕರು ಹಾಗೂ ವಯೋವೃದ್ಧರು ಪರಸ್ಪರ ಆಲಿಂಗನ ಮಾಡಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಈದ್ಗಾ ಸಮಿತಿ ಅಧ್ಯಕ್ಷ ಎ.ಆರ್. ಪಾಶಾ, ಸೈಯದ್ ಅಹ್ಮದ್ ಪಾಶಾ ಖಾದ್ರಿ, ಅಹ್ಮದ್ ಪಠಾಣ, ಖಾಜಾ ಖಲೀಲ್ ಅಹ್ಮದ್ ಅರಕೇರಿ, ಉಸ್ತಾದ್ ವಜಾಹತ್ ಹುಸೇನ್, ಲಿಯಾಖತ್ ಹುಸೇನ್, ಅಬ್ದುಲ್ ಮುಲ್ಲಾ, ತೌಫೀಕ್ ಅಹ್ಮದ್ ಅರಕೇರಿ, ಮಹಿಬೂಬ್ ಜಮಾದಾರ್, ಅನ್ವರ್ ಜಮಾದಾರ್, ಖಾದರ್ ಪಟೇಲ್, ಇಮ್ತಿಯಾಜ್ ಹುಸೇನ್, ಅಬೂಬಕರ್ ಬೇಗ್, ಖಾಜಾ ನಿಜಾಮುದ್ದೀನ್, ಮೊಹ್ಮದ್ ಆರೀಫ್, ಅರ್ಷದ್, ಎಂಡಿ ಗೌಸ್, ಇರ್ಫಾನ್, ಮೌಲಾಲಿ ಸೌದಾಗರ್, ಖಾಜಾ ಹುಸೇನ್ ಗುಡುಗುಂಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರು ತಮ್ಮ ಶಕ್ತಿಗೆ ಅನುಗುಣವಾಗಿ ದಾನ-ಧರ್ಮ ಕಾರ್ಯಗಳನ್ನು ನೆರವೇರಿಸಿದರು. ನಂತರ ತಮ್ಮ ಮನೆಗಳಿಗೆ ತೆರಳಿ ಸ್ನೇಹಿತರು, ಬಂಧುಗಳು ಹಾಗೂ ಪರಿಚಯಸ್ಥರನ್ನು ಆಹ್ವಾನಿಸಿ ಹಬ್ಬದ ವಿಶೇಷ ಸಿಹಿ ಖಾದ್ಯಗಳನ್ನು ಸವಿದು ಒಟ್ಟಾಗಿ ಭೋಜನ ಮಾಡಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

