ನೀರಿಲ್ಲದೆ ರೈತ ಸಂಕಷ್ಟ ತೀವ್ರ|ಏಪ್ರಿಲ್ 15ರವರೆಗೆ ನೀರು ಹರಿಸಲು ಒತ್ತಾಯ | ತೀರ್ಮಾನ ಬದಲಿಸದಿದ್ದರೆ ಹೋರಾಟದ ಎಚ್ಚರಿಕೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಕಾಲುವೆ ನೀರಿನ ಕೊರತೆಯಿಂದ ರೈತರು ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದು, ಏಪ್ರಿಲ್ 15ರವರೆಗೆ ನಿರಂತರವಾಗಿ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ದಸಂಸ ಜಂಟಿ ಹೋರಾಟ ಸಮಿತಿಯ ಮುಖಂಡರು ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಮುಖಂಡರು, ಇತ್ತೀಚೆಗೆ ನಡೆದ ನೀರಾವರಿ ಸಲಹಾ ಸಮಿತಿಯ ತೀರ್ಮಾನವನ್ನು ತೀವ್ರವಾಗಿ ವಿರೋಧಿಸಿದರು. ಕಾಲುವೆಗಳಿಗೆ ನೀರು ಹರಿಸುವ ವಿಷಯದಲ್ಲಿ ಸರ್ಕಾರ ಅವೈಜ್ಞಾನಿಕ ನಿಲುವು ತೆಗೆದುಕೊಂಡಿದೆ ಎಂದು ಆರೋಪಿಸಿದರು.
ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆಗಳು ಹಾನಿಗೊಳಗಾಗಿದ್ದು, ಬಹುತೇಕ ರೈತರಿಗೆ ಪರಿಹಾರವೂ ಸಿಗದೆ ಸಂಕಷ್ಟ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬೇಸಿಗೆ ಹಂಗಾಮಿನಲ್ಲಿ ನೀರಿನ ಕೊರತೆ ಮತ್ತಷ್ಟು ಸಮಸ್ಯೆ ಉಂಟುಮಾಡಿದೆ. ಮಾರ್ಚ್ ೨೧ರಿಂದ ಕಾಲುವೆ ನೀರು ಬಂದ್ ಆಗಿ, ಏಪ್ರಿಲ್ 1ರವರೆಗೆ ನೀರು ಲಭ್ಯವಿರುವುದಿಲ್ಲ. ನಂತರ ಕೇವಲ ಮೂರು ದಿನ ಮಾತ್ರ ನೀರು ಹರಿಸುವ ನಿರ್ಧಾರದಿಂದ ಕಾಲುವೆಯ ಕೊನೆಯ ಭಾಗದ ರೈತರಿಗೆ ನೀರು ತಲುಪುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ರೈತರಿಗೆ ಬೆಳೆ ಕೈಗೆ ಬರಬೇಕಾದರೆ ಕನಿಷ್ಠ ಏಪ್ರಿಲ್ ೧೫ರವರೆಗೆ ನೀರು ಹರಿಸಬೇಕು. ಇಲ್ಲದಿದ್ದರೆ ಬೆಳೆ ನಷ್ಟ, ಸಾಲಬಾಧೆ, ವಲಸೆ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಇದೇ ವೇಳೆ, ಆಲಿಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀರಾವರಿ ಹಾಗೂ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ ಎಂದು ಹೇಳಿದರು. ಈ ಕುರಿತು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರಕಾರ ತಕ್ಷಣ ನೀರಾವರಿ ಸಲಹಾ ಸಮಿತಿಯ ತೀರ್ಮಾನವನ್ನು ಮರುಪರಿಶೀಲಿಸಿ ಏಪ್ರಿಲ್ 15ರವರೆಗೆ ಕಾಲುವೆಗಳಿಗೆ ನೀರು ಹರಿಸಲು ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತರು ರಸ್ತೆಗಿಳಿದು ಉಗ್ರ ಹೋರಾಟ ಆರಂಭಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶರಣು ಮಂದರವಾಡ, ಧರ್ಮಣ್ಣ ದೊರೆ, ಮುದ್ದಣ್ಣ ಅಮ್ಮಾಪೂರ, ಬುಚ್ಚಪ್ಪ ನಾಯಕ ಕಕ್ಕೇರಾ, ಮಲ್ಕಣ್ಣ ಚಿಂತಿ, ಭೀಮಣ್ಣ ನಾಯಕ, ಯಲ್ಲಪ್ಪ ನಾಯಕ ಗುಡ್ಡಕಾಯಿ, ಮಲ್ಲನಗೌಡ ಮಾಲಿ ಪಾಟೀಲ್, ಮಲ್ಲಣ್ಣ ಚನ್ನೂರು, ಅಯ್ಯಪ್ಪ ಅನಸೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಐಸಿಸಿ ಸಭೆ ಕರೆಯಲು ಒತ್ತಾಯ
ನೀರಾವರಿ ಸಲಹಾ ಸಮಿತಿ ಸಭೆಯನ್ನು ತಕ್ಷಣ ಕರೆದು ಹಿಂದಿನ ತೀರ್ಮಾನವನ್ನು ಬದಲಿಸಿ, ಕಾಲುವೆಗಳಿಗೆ ಏಪ್ರಿಲ್ ೧೫ರವರೆಗೆ ನೀರು ಹರಿಸುವ ನಿರ್ಧಾರ ಕೈಗೊಳ್ಳಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.
“ಆಲಿಮಟ್ಟಿ ಜಲಾಶಯವನ್ನು ೫೨೪ ಮೀಟರ್‌ಗಳಿಗೆ ಎತ್ತರಿಸಿದರೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ. ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು.”
— ಚನ್ನಪ್ಪ ಆನೆಗುಂದಿ, ರಾಜ್ಯ ಉಪಾಧ್ಯಕ್ಷ, ಕೆಪಿಆರ್‌ಎಸ್

