ಮಾವುಪ್ರಿಯರು ಖುಷ್, ನಾನಾ ತಳಿಗಳು ಲಭ್ಯ,ಹಣ್ಣುಗಳ ರಾಜ ಮಾವಿನ (ಸುರ) ಪುರ ಪ್ರವೇಶ

ಸುರಪುರ ಟೈಮ್ಸ್ ವಾರ್ತೆ
ಸುರಪುರ:ಹಣ್ಣುಗಳ ರಾಜನ (ಸುರ) ಪುರ ಪ್ರವೇಶವಾಗಿದ್ದು, ನಗರದ ಮಾರುಕಟ್ಟೆಗಳಲ್ಲಿ ಈಗ ಮಾವಿನ ಹವಾ ಭರ್ಜರಿಯಾಗಿದೆ. ರಸ್ತೆ ಬದಿಯ ಅಂಗಡಿಗಳಿಗೆ ರಾಶಿ ರಾಶಿಯಾಗಿ ಬಂದಿಳಿದಿರುವ ಮಾವು ಹಣ್ಣುಗಳು ಗ್ರಾಹಕರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ.

ಹಾಲು ಗಲ್ಲದ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುವ ಹಾಗೂ ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣಿಗೆ ಈಗ ಎಲ್ಲಿಲ್ಲದ ಬೇಡಿಕೆ. ರಸ್ತೆ ಬದಿಯ ಮಾವು ಹಣ್ಣಿನ ಅಂಗಡಿಗಳು ಆಕರ್ಷಣೆಯ ಕೇಂದ್ರ ಬಿಂದುಗಳಾಗಿದ್ದು, ಮಾವು ಪ್ರಿಯರಿಗೆ ಹಬ್ಬವೋ ಹಬ್ಬ.

ಪೋಟೊ; ಸರ್ದಾರ್ ವಲ್ಲಭಭಾಯ್ ಪಟೇಲ್ ಚೌಕ್ ನಲ್ಲಿ ಇರುವ ಬಗ್ಗೆ ಬಗ್ಗೆಯ ಮಾವುಗಳು

ಬಸ್ ನಿಲ್ದಾಣ, ಗಾಂಧಿ ಚೌಕ, ಅರಮನೆ ರಸ್ತೆ, ಸರ್ದಾರ ವಲ್ಲಭಭಾಯಿ ಪಟೇಲ್ ಚೌಕ್, ಕಾಯಿಪಲ್ಲೆ ಮಾರುಕಟ್ಟೆ ಹೀಗೆ ಕಣ್ಣು ಹಾಯಿಸಿದಲ್ಲೆಲ್ಲಾ ಮಾವಿನ ಖದರ್. ಗಲ್ಲಿ-ಗಲ್ಲಿಯಲ್ಲೂ ಈಗ ತಳ್ಳು ಗಾಡಿಗಳಲ್ಲಿ ಮಾವಿನದೇ ಕಾರುಬಾರು.

ಪ್ರತಿ ವರ್ಷ ಸಾಮಾನ್ಯವಾಗಿ ಮೇ ತಿಂಗಳಲ್ಲಿ ಮಾವಿನ ಋತು ಆರಂಭವಾಗುತ್ತದೆ. ಮೇ ತಿಂಗಳಿಂದ ಜುಲೈವರೆಗೆ ಮಾವಿನ ಸುಗ್ಗಿ ಮುಂದುವರಿಯುತ್ತದೆ. 3 ತಿಂಗಳ ಕಾಲ ಮಾವು ವ್ಯಾಪಾರಿಗಳಿಗೆ ಬಿಡುವಿಲ್ಲದ ದುಡಿಮೆ. ಈ ಅವಧಿಯಲ್ಲಿ ರಸ್ತೆ ಬದಿಯಲ್ಲಿ ಮಾವು ಹಣ್ಣಿನ ಅಂಗಡಿಗಳು ತಲೆ ಎತ್ತುವುದು ರೂಢಿ. ಹೆದ್ದಾರಿ ಅಕ್ಕಪಕ್ಕ, ಸರ್ವಿಸ್‌ ರಸ್ತೆ, ಹೆಚ್ಚಿನ ಜನಸಂದಣಿ ಇರುವ ರಸ್ತೆಗಳು, ಮಾರುಕಟ್ಟೆ ಹಾಗೂ ಸರ್ಕಾರಿ ಕಚೇರಿಗಳ ಅಕ್ಕಪಕ್ಕದ ರಸ್ತೆಗಳು ಮಾವಿನ ಮಾರಾಟಕ್ಕೆ ಪ್ರಶಸ್ತ ಸ್ಥಳಗಳು.

ಆರೋಗ್ಯಕ್ಕೆ ಒಳ್ಳೆಯದು: ಮಾವಿನ ಹಣ್ಣಿನ ಸ್ವಾದವೇ ಅಂತಹದ್ದು. ದೊಡ್ಡವರಿರಲಿ, ಚಿಕ್ಕವರಿರಲಿ, ಹಣ್ಣಿನ ಹೋಳು ಬಾಯಿಗೆ ಬಿದ್ದರೆ ಸಾಕು ಲಾಲಾರಸ ಗ್ರಂಥಿಗಳು ತಾವಾಗೇ ಅರಳುತ್ತವೆ. ಆನಂದಮಯ ರಸಾನುಭೂತಿಗೆ ವಯಸ್ಸು ಅಡ್ಡಿಯಾಗದು. ಮಾವಿನ ಹಣ್ಣು ಬಾಯಿಗೆ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು.
ಈ ಹಣ್ಣಿನ ಸೇವನೆಯು ಜೀರ್ಣ ಕ್ರಿಯೆಗೆ ಪೂರಕ. ಅಜೀರ್ಣ ಸಮಸ್ಯೆಯಿಂದ ಬಳಲುವವರು ಮಾವಿನ ಹಣ್ಣು ತಿನ್ನುವುದು ಒಳ್ಳೆಯದು. ಈ ಹಣ್ಣಿನಲ್ಲಿ ನಾರಿನಂಶ ಮತ್ತು ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕೊಬ್ಬಿನಾಂಶ ಕಡಿಮೆ ಮಾಡಲು ಸಹಕಾರಿಯಾಗಿದೆ.
ಮಾವಿನ ಕಾಯಿ ಅಥವಾ ಹಣ್ಣಿನಲ್ಲಿರುವ ಗ್ಲೂಟಾಮೈನ್ ಆಸಿಡ್ ಅಂಶವು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಕ್ಯಾನ್ಸರ್ ಕಾಯಿಲೆ ಮತ್ತು ಹೃದಯ ಸಂಬಂಧಿ ಸಮಸ್ಯೆ ನಿಯಂತ್ರಣದಲ್ಲಿಡಲು ಮಾವು ಸಹಕಾರಿ ಎಂದು ವೈದ್ಯರು ಹೇಳುತ್ತಾರೆ.
ಖರೀದಿಯಲ್ಲಿ ಎಚ್ಚರವಿರಲಿ: ಗ್ರಾಹಕರು ಮಾವು ಹಣ್ಣು ಖರೀದಿಸುವಾಗ ಆಕರ್ಷಣೆಗೆ ಮಾರು ಹೋಗಿ ಎಚ್ಚರ ತಪ್ಪಿದರೆ ಅನಾರೋಗ್ಯಪೀಡಿತರಾಗಿ ಆಸ್ಪತ್ರೆ ಸೇರಬೇಕಾಗುತ್ತದೆ. ಕೆಲ ವ್ಯಾಪಾರಿಗಳು ಲಾಭದಾಸೆಗೆ ಮತ್ತು ಗ್ರಾಹಕರನ್ನು ಸೆಳೆಯಲು ಕ್ಯಾಲ್ಸಿಯಂ ಕಾರ್ಬೈಡ್‌ ಎಂಬ ವಿಷಕಾರಿ ರಾಸಾಯನಿಕ ಬಳಸಿ ಅವಧಿಗೂ ಮುನ್ನವೇ ಮಾವಿನ ಕಾಯಿಗಳನ್ನು ಕೃತಕವಾಗಿ ಮಾಗಿಸಿ ಮಾರಾಟ ಮಾಡುತ್ತಾರೆ.
ಈ ಹಣ್ಣುಗಳು ನೋಡಲು ಆಕರ್ಷಕವಾಗಿದ್ದು, ಗ್ರಾಹಕರನ್ನು ನೋಟದಲ್ಲೇ ಸೆಳೆಯುತ್ತವೆ. ಆದರೆ, ನೈಸರ್ಗಿಕವಾಗಿ ಮಾಗಿದ ಹಣ್ಣುಗಳಿಗೆ ಹೋಲಿಸಿದರೆ ಇವು ಹೆಚ್ಚು ರುಚಿಕರವಲ್ಲ. ಪೂರ್ಣ ಪ್ರಮಾಣದಲ್ಲಿ ಮಾಗದ ಈ ಹಣ್ಣುಗಳಲ್ಲಿ ಹುಳಿ ಅಂಶ ಹೆಚ್ಚಿರುತ್ತದೆ. ಜತೆಗೆ ಈ ಹಣ್ಣುಗಳು ಗುಣಮಟ್ಟದಿಂದ ಕೂಡಿರುವುದಿಲ್ಲ ಮತ್ತು ಬಾಳಿಕೆ ಅವಧಿ ತುಂಬಾ ಕಡಿಮೆ. ಈ ಹಣ್ಣುಗಳನ್ನು ಸೇವಿಸಿದರೆ ಕಾಯಿಲೆ ಬೀಳುವುದು ನಿಶ್ಚಿತ. ಆದ ಕಾರಣ ಗ್ರಾಹಕರು ಹಣ್ಣು ಖರೀದಿಸುವಾಗ ಎಚ್ಚರ ವಹಿಸುವುದು ಸೂಕ್ತ.

Leave a Reply

Your email address will not be published. Required fields are marked *

error: Content is protected !!