ತಾಲೂಕಿನಲ್ಲಿ ಅಕಾಲಿಕ ಮಳೆ, ಸಿಡಿಲು, ಗುಡುಗು ವೇಳೆ ಸಾವು, ನೋವು,ಬೆಳೆ ಹಾನಿ, ಪರಿಹಾರ ಮುಂದೆ ಜಾಗೃತಿ ಹಿಂದೆ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಸಿಡಿಲು ಬಡಿದು ಮೃತಪಡುವ ರೈತರಿಗೆ ಸರಕಾರ 24 ಗಂಟೆಯೊಳಗೆ ಪರಿಹಾರ ನೀಡುವುದರಲ್ಲಿ ಮುಂದೆ ಇದ್ದು, ಜನರಿಗೆ ಜಾಗೃತಿ ಮೂಡಿಸುವಲ್ಲಿ ಹಿಂದೆ ಬಿದ್ದಿದೆ!

ಮುಂಗಾರು, ಹಿಂಗಾರು ಮಾತ್ರವಲ್ಲದೇ ಆಕಾಲಿಕವಾಗಿ ಮಳೆ ಸುರಿದಾಗ ನಾನಾ ಅವಘಡ ಸಂಭವಿಸುವುದು ಸಾಮಾನ್ಯ ವಾಗಿದೆ. ಕಟಾವಿಗೆ ಬಂದ ಭತ್ತ ಸೇರಿ ನಾನಾ ಬೆಳೆ ನೆಲಕಚ್ಚುವುದು ಒಂದೆಡೆಯಾದರೆ ಆಗಾಗ್ಗೆ ಜೀವಹಾನಿಯಾಗುವುದು ನಡೆಯುತ್ತಿದೆ. ಜೋರು ಮಳೆ ಸಹಿತ ಗುಡುಗು, ಸಿಡಿಲಿ ನೊಂದಿಗೆ ವರುಣ ಆರ್ಭಟಿಸಿದಾಗ ರೈತರು, ಜಾನುವಾರುಗಳು ಪ್ರಾಣ ಕಳೆದುಕೊಳ್ಳುವಂತಾಗಿದೆ.

ಹಾನಿಯ ಸ್ವರೂಪ:

ಕುರಿ ಮೇಯಿಸಲು ಹೋದ, ದನಗಳಿಗೆ ಮೇವು ಹಾಕಲು ತೆರಳಿದ, ತೋಟಕ್ಕೆ ನೀರು ಬಿಡುವ ಕಾರ್ಯದಲ್ಲಿ ತೊಡಗಿದ, ಜಮೀನಿನಿಂದ ವಾಪಸ್ ಮನೆಗೆ ಬರುವಾಗ ಮುಂತಾದ ಸಂದರ್ಭ ಮಳೆಯಿಂದ ರಕ್ಷಣೆ ಪಡೆಯಲು ಗಿಡ-ಮರದಡಿ ನಿಂತವರು ಜೀವ ಕಳೆದುಕೊಳ್ಳುವಂತಾಗಿದೆ. ಇಂತಹ ಸಂದರ್ಭಜೀವ ಕಳೆದುಕೊಂಡವರಿಗೆ ಪ್ರಕೃತಿ ವಿಕೋಪದಡಿ ಘಟನೆ ಸಂಭವಿಸಿದ ಇಪ್ಪತ್ನಾಲ್ಕು ಗಂಟೆಯೊಳಗೇ ಪರಿಹಾರ ವಿತರಿಸುವ ಕಾರ್ಯ ಚುರುಕಿನಿಂದಲೇ ನಡೆಯುತ್ತಿದೆ. ಮೃತರ ಅವಲಂಬಿತರ ಖಾತೆಗಳಿಗೆ ನೇರವಾಗಿ ಪರಿಹಾರ ಜಮೆ ಮಾಡುವ ಕೆಲಸ ಚಾಚೂ ತಪ್ಪದೇ ಆಗುತ್ತಿದೆ. ಆದರೆ, ಪರಿಹಾರ ಕೊಡುವ ಕಾರ್ಯವಷ್ಟೇ ಹೆಚ್ಚು ವೇಗದಿಂದ ನಡೆಯುತ್ತಿದ್ದು, ಈ ಬಗ್ಗೆ ಸಮರ್ಪಕ ಜಾಗೃತಿ ಮೂಡಿಸಿದ ನಿದರ್ಶನ ಕಮ್ಮಿ ಎಂಬ ದೂರುಗಳು ಕೇಳಿ ಬರುತ್ತಿವೆ.

ಸಿಡಿಲಿನಿಂದ ರಕ್ಷಿಸಿಕೊಳ್ಳಲು ಹೀಗೆ ಮಾಡಿ : ಮನೆಯೊಳಗೆ
ಇರಿ. ಕಿಟಕಿ, ಬಾಗಿಲುಗಳನ್ನು ಮುಚ್ಚಿ, ಮರಗಳ ಕೆಳಗೆ ಆಶ್ರಯ ಪಡೆಯಬೇಡಿ. ಎಲೆಕ್ನಿಕಲ್/ಎಲೆಕ್ಟ್ರಾನಿಕ್ ಉಪಕರಣಗಳನ್ನು ತಕ್ಷಣವೇ ಅನ್‌ಪ್ಲಗ್ ಮಾಡಿ. ತಕ್ಷಣ ಜಲಮೂಲಗಳಿಂದ ಹೊರ ಬನ್ನಿ, ವಿದ್ಯುಚ್ಛಕ್ತಿಯಿಂದ ನಡೆಯುವ ಎಲ್ಲ ವಸ್ತುಗಳಿಂದ ದೂರವಿರಿ. ನೀರಿಲ್ಲದ ತಗ್ಗು ಪ್ರದೇಶಕ್ಕೆ ಹೋಗಿ ತಲೆಯನ್ನು ಎರಡು ಮೊಣ ಕಾಲು ಮಧ್ಯೆ ಇರುವಂತೆ ನೋಡಿಕೊಂಡು ಕುಳಿತು ಕೊಳ್ಳಿ. ಹೆಚ್ಚು ದನಗಳು ಇದ್ದಾಗ ಅದರ ಮಧ್ಯೆ ಹೋಗಿ ಕುಳಿತು ಕೊಳ್ಳಿ, ಸಿಡಿಲಿನ ಮುಂದಿನ ಮೂರು ತಾಸುಗಳ ಪ್ರಕೃತಿಯ ಮಾಹಿತಿಯನ್ನು ತಿಳಿಸುವ ಮಾಹಿತಿ ತಿಳಿಸುವ ಸ್ಯಾಚಾಟ್ ಆ್ಯಪ್ ಬಳಸಿಕೊಳ್ಳಿ ಎನ್ನುತ್ತಾರೆ ತಾಲೂಕು ತಹಸೀಲ್ದಾರ್ ಎಚ್.ಎ ಸರಕಾವಸ್.

ಸಾವು, ಪರಿಹಾರದ ವಿವರ
ತಾಲೂಕಿನಾದ್ಯಂತ ಸುಮಾರು 143 ಹೆಕ್ಟರ್ ಬೆಳೆ ಹಾನಿ ಹಾಗಿದ್ದು. ಅದೇ ರೀತಿ ತಾಲೂಕಿನಾದ್ಯಂತ ಆಕಳು, ಎಮ್ಮೆ, ಎತ್ತು ಸೇರಿ 14 ದೊಡ್ಡ ಜಾನುವಾರುಗಳು ಸಿಡಿಲಿನಿಂದ ಪ್ರಾಣ ಕಳೆದುಕೊಂಡಿದ್ದು ವಾರಸುದಾರರಿಗೆ ರೂ. 56000 ಪರಿಹಾರ ಕೊಡಲಾಗಿದೆ. ನಿನ್ನೆ ಸುರಿದ ಮಳೆಗೆ 5 ಕುರಿಗಳು ರತ್ತಾಳ ಗ್ರಾಮದಲ್ಲಿ
ಸಿಡಿಲಿಗೆ ಬಲಿಯಾಗಿದ್ದು ಪರಿಹಾರ ನೀಡಬೇಕಾಗಿದೆ.

ಆಗ್ರಹ

ಸಿಡಿಲಿನ ಹೊಡೆತದಿಂದ ಪಾರಾಗಲು ಏನು ಮಾಡಬೇಕು, ಏನು ಮಾಡಬಾರದು ಎಂಬ ಕುರಿತು ಸಮರ್ಪಕವಾಗಿ ಜಾಗೃತಿ ಮೂಡಿಸುವ ಕಾರ್ಯಗಳು ಆಗುತ್ತಿಲ್ಲ ಎಂಬ ದೂರುಗಳಿವೆ. ಜಮೀನಿನಲ್ಲಿ ಕೆಲಸ ಮಾಡುವ ಬಹುತೇಕ ರೈತ ಅಥವಾ ರೈತ ಮಹಿಳೆಯರು ಅನಕ್ಷರಸ್ಥರೇ ಆಗಿರುವುದರಿಂದ ಅವರನ್ನು ತಲುಪಬಹುದಾದ ಸುಲಭ ಮಾರ್ಗ ಅನುಸರಿಸುವುದು, ಗ್ರಾಮಗಳಲ್ಲಿನ ಚರ್ಚ್, ಮಸೀದಿ, ಮಂದಿರಗಳಲ್ಲಿನ ಮೈಕ್ ಮೂಲಕ ಮಳೆಗಾಲ ಮುಗಿಯುವವರೆಗಾದರೂ ಪ್ರತಿ ದಿನ ಜಾಗೃತಿ ಸಂದೇಶ ಕೇಳಿಸುವುದಾಗಬೇಕಿದೆ.

ಘಟನೆ ಬಳಿಕ ಸಾಂತ್ವನ ಹೇಳುವ, ಪರಿಹಾರ ವಿತರಿಸುವುದಕ್ಕಿಂತ ಮುಖ್ಯವಾಗಿ ಹೆಚ್ಚು ಜಾಗೃತಿ ಮೂಡಿಸುವ ಕೆಲಸ ಸಮರ್ಪಕವಾಗಿ ನಡೆದರೆ ಸಾವುಗಳ ಸಂಖ್ಯೆ ತಗ್ಗಿಸಬಹುದು ಎಂಬ ಅಭಿಪ್ರಾಯ ಪ್ರಜ್ಞಾವಂತರಿಂದ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!