ಸಿಜೆಇ ಗವಾಯಿ ಮೊದಲ ಬೌದ್ಧ ಧರ್ಮಿಯರು ಹೇಳಲು ಹೆಮ್ಮೆ: ರಾಹುಲ್ ಹುಲಿಮನಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಭಾರತದ ಸರ್ವೋಚ್ಚ ನ್ಯಾಯಾಲಯದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಮೊದಲ ಬೌದ್ಧ ಧರ್ಮಿಯರು ಎಂದು ಹೇಳಲು ಹೆಮ್ಮೆ ಎನ್ನಿಸುತ್ತದೆ ಎಂದು ಮೂಲ ನಿವಾಸಿ ಅಂಬೇಡ್ಕರ್ ಸಂಘದ ರಾಜ್ಯ ಸಂಘಟನಾ ಸಂಚಾಲಕ ಮತ್ತು ಬೌದ್ಧ ಉಪಾಸಕ ರಾಹುಲ್ ಹುಲಿಮನಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು. ನ್ಯಾಯಮೂರ್ತಿ ಗವಾಯಿ ಅವರ ತಂದೆ 1956ರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಾರಂಭಿಸಿದ ಧರ್ಮಾಂತರ ಚಳವಳಿಯಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದರು. ಆದಾದ ನಂತರ ಗವಾಯಿಯವರ ಇಡೀ ಕುಟುಂಬ ಬೌದ್ಧ ಧರ್ಮವನ್ನು ಸೇರಿತು. ಈಗಲೂ ನ್ಯಾಯಮೂರ್ತಿ ಗವಾಯಿ ಮತ್ತು ಅವರ ಕುಟುಂಬ ಬೌದ್ಧ ಧರ್ಮವನ್ನು ಅಳವಡಿಸಿಕೊಂಡಿದೆ ಎಂದು ಹೇಳಿದ್ದಾರೆ. ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣಗವಾಯಿ ಅವರು ಸಿಜೆಐ ಆಗಿರುವುದು ಈ ದೇಶದ ಮೂಲ ನಿವಾಸಿಗಳಾದ ಬೌದ್ಧರಿಗೆ ಹೆಮ್ಮೆಯ ವಿಷಯವಾಗಿದೆ. ದಲಿತರಿಗೆ ಕ್ರಾಂತಿ ಭೂಮಿಯಾದ ನಾಗಪುರದ ದೀಕ್ಷಾ ಭೂಮಿಯ ಬೌದ್ಧ ವಿಹಾರದ ಅಭಿವೃದ್ಧಿಗೆ ಗವಾಯಿಯವರ ತಂದೆಯವರ ಕೊಡುಗೆ ಅಪಾರವಾಗಿದೆ. ಇವರ ತಂದೆಯವರು ದೀಕ್ಷಾ ಭೂಮಿಗೆ ಅಧ್ಯಕ್ಷರು ಆಗಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಇತ್ತೀಚೆಗೆ ಇಂದ್ರಪ್ರಸ್ಥ ಉದ್ಯಾನವನದಲ್ಲಿರುವ ಬೌದ್ಧ ಶಾಂತಿ ಸ್ತೂಪಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ ಮತ್ತು ದೇಶದ ಸಂವಿಧಾನದೇ ನನ್ನ ಸರ್ವೋಚ್ಚ ಎಂದು ಹೇಳಿದ್ದಾರೆ. ನ್ಯಾಯಮೂರ್ತಿ ಗವಾಯಿ ಅವರ ಆಯ್ಕೆಗೆ ಬೌದ್ಧ ಸಮುದಾಯ ಸಂತಸ ವ್ಯಕ್ತಪಡಿಸಿದೆ ಎಂದು ಅವರು ತಿಳಿಸಿದ್ದಾರೆ.
