ನಮ್ಮ ಶಾಲೆ ,ನಮ್ಮ ಜವಾಬ್ದಾರಿ ಕಾರ್ಯಕ್ರಮ ,ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಳವಾಗಲಿ : ಬಸವರಾಜ ಸಜ್ಜನ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಸರಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಜತೆಗೆ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಸಜ್ಜನ್ ಹೇಳಿದರು.

ಸಮೀಪದ ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಶುಕ್ರವಾರ ಶಾಲಾ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ವಿನೂತನ ಕಾರ್ಯಕ್ರಮವಾದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ-2025 ಉದ್ಘಾಟಿಸಿ ಮಾತನಾಡಿದ ಅವರು, ಸರಕಾರ ಮಕ್ಕಳಿಗಾಗಿ ಉಚಿತ ಶಿಕ್ಷಣದ ಜತೆಗೆ ಬಿಸಿಯೂಟ ಸೇರಿ ನಾನಾ ಯೋಜನೆಗಳನ್ನು ರೂಪಿಸಿದ್ದು, ಅರ್ಹ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸುವುದು ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ಸರಕಾರಿ ಶಾಲೆಗಳಲ್ಲಿ ಕಲಿತ ಅದೇಷ್ಟೋ ವಿದ್ಯಾರ್ಥಿಗಳು ನಾನಾ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಮೇ.29 ರಂದು ಶಾಲೆಗಳು ಆರಂಭವಾಗಲಿದ್ದು ಅಷ್ಟರಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಪ್ರವೇಶ ಪಡೆಯಬೇಕು. ಸರಕಾರಿ ಶಾಲೆಯಲ್ಲಿ ಅನುಭವಿ ಶಿಕ್ಷಕರಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ನೀಡಲಾಗುತ್ತಿದ್ದು. ಪಾಲಕರು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲಿಸಬೇಕು ಎಂದು ಪುನರುಚ್ಚರಿಸಿದರು.

ಮುಖ್ಯ ಅತಿಥಿಯಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಹೆಚ್.ಸತೀಶ್ ಮಾತನಾಡಿ, ಪಾಲಕರು ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು. ಬನ್ನಿ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ-ಕಲಿಕೆಯನ್ನು ಪೋಷಿಸಿ ಎಂದು ತಿಳಿ ಹೇಳಿದರು. ಕೆಪಿಎಸ್‌ನ ಪ್ರಾಂಶುಪಾಲ ಬಸವರಾಜ್ ಕೊಡೇಕಲ್ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಪಂಡಿತ್ ನಿಂಬೂರ್, ಶಿಕ್ಷಣ ಸಂಯೋಜಕ ಶರಣಬಸವ ಗಚ್ಚಿನಮನಿ, ಉಪ ಪ್ರಾಂಶುಪಾಲರು ಸಿದ್ದಣ್ಣ ಹೊಸಗೌಡ್ರು, ಎಸ್‌ಡಿಎಂಸಿ ಅಧ್ಯಕ್ಷ ನಾಸೀರ್ ಹುಸೇನ್ ಕುಂಡಾಲೆ, ಉಪಾಧ್ಯಕ್ಷ ರಮೇಶ ಯಾದವ, ವೇದಿಕೆಯಲ್ಲಿದ್ದರು. ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಖಾದರ್ ಪಟೇಲ್. ಸಿಆರ್‌ಪಿಗಳಾದ ರಾಮಣ್ಣ ಗುಂಜ್ಞಾಳ, ಶಿವಕುಮಾರ ಕಮತಗಿ, ಚನ್ನಪ್ಪ ಕ್ಯಾದಗಿ, ಬಿಆರ್‌ಪಿ ಮಹಾಂತೇಶ ಸೇರಿ ಪಾಲಕ ಪೋಷಕರು ಮತ್ತು ಇತರ ಶಿಕ್ಷಕರಿದ್ದರು. ಶ್ರೀನಿವಾಸ ಕುಲಕರ್ಣಿ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!