ನೀರಿಗಾಗಿ ಹಾಹಾಕಾರ !ಖಾಲಿ ಕೊಡಗಳೊಂದಿಗೆ ವಾಗಣಗೇರಾ ಗ್ರಾಮಸ್ಥರಿಂದ ಪ್ರತಿಭಟನೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ನಮ್ಮ ಗ್ರಾಮದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ ಗ್ರಾಮ ಪಂಚಾಯಿತಿಯವರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ವಾಗಣಗೇರಾ ಗ್ರಾಮದ ವಾಡ್.1 ರ ಸಾರ್ವಜನಿಕರು ಸೋಮವಾರ ತಹಸಿಲ್ ಕಚೇರಿ ಮುಂದೆ ಪ್ರತಿಭಟಿಸಿದರು.
ಖಾಲಿ ಕೊಡಗಳ ಜತೆಯಲ್ಲಿ ಆಗಮಿಸಿದ ಗ್ರಾಮದ ಮಹಿಳೆಯರು, ಪುರುಷರು ವಾಗಣಗೇರಾ ಗ್ರಾಮ ಪಂಚಾಯಿತಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಳೆದ ಒಂದು ವರ್ಷದಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ನೀರಿಗಾಗಿ ಹಗಲು-ರಾತ್ರಿ ಪರಿತಪಿಸುವಂತಾಗಿದೆ ನಮ್ಮ ಸಮಸ್ಯೆ ಯಾರು ಕೇಳುತ್ತಿಲ್ಲ ಎಂದು ದೂರಿದರು.
ವಾರ್ಡ್ ನಂ.1 ರಲ್ಲಿ ನೀರಿನ ಸಮಸ್ಯೆ ಇತ್ಯರ್ಥಪಡಿಸಿ ಎಂದು ಗ್ರಾಪಂ ಸಂಬಂಧಿಸಿದವರಿಗೆ ಅನೇಕ ಬಾರಿ ಮನವಿ ಮಾಡಿಕೊಂಡರು ಸಹ ಅವರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ನಮ್ಮ ವಾರ್ಡ್ನಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿದೆ, ನಿತ್ಯ ನೀರಿಗಾಗಿ ಪರದಾಟ ಮುಂದುವರೆದಿದೆ ಎಂದು ದೂರಿದರು.
ಮಹಿಳೆಯರು, ಪುರುಷರು, ಮಕ್ಕಳು ಗ್ರಾಮದಿಂದ ಒಂದು ಕಿಮೀ ದೂರದಿಂದ ಪ್ರತಿ ದಿನ ನೀರು ತರಬೇಕಾದ ಪರಿಸ್ಥಿತಿ ಇದೆ. ಹಗಲು-ರಾತ್ರಿ ನೀರು ತರುವುದೇ ಕೆಲಸವಾಗಿದೆ. ಹಳದ ಕಲುಷಿತ ನೀರು ಕುಡಿಯುತ್ತಿರುವುದರಿಂದ ಗ್ರಾಮಸ್ಥರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಗ್ರಾಪಂ ಪಿಡಿಒಗೆ ತಿಳಿಸಿದರೂ ಸಹ ಕುಡಿವ ನೀರಿನ ವ್ಯವಸ್ಥೆ ಮಾಡುತ್ತಿಲ್ಲ ನೀರಿಗಾಗಿ ನಾವುಗಳು ಬಹಳ ಕಷ್ಟಪಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಧರಣಿ ಕುಳಿತರು. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಎಚ್.ಎ.ಸರಕಾವಸ್ ಆಗಮಿಸಿ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ ಸಂಬಂಧಿಸಿದವರು ಕರೆಯಿಸಿ ನಿಮ್ಮ ವಾರ್ಡ್ನ ನೀರಿನ ಸಮಸ್ಯೆ ಹೋಗಲಾಡಿಸುವುದಾಗಿ ಹೇಳಿದಾಗ ಗ್ರಾಮಸ್ಥರು ಪ್ರತಿಭಟನೆ ವಾಪಸ್ ಪಡೆದರು.





