ಕರ್ನಾಳ ಏತ ನೀರಾವರಿ ಯೋಜನೆಗೆ ಅನುಮೋದನೆ ಶಾಸಕ ;ಆರ್ವಿನ್ ಹರ್ಷ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ತಾಲೂಕಿನ ಮಹತ್ವಾಕಾಂಕ್ಷಿ ಕರ್ನಾಳ ಏತ ನೀರಾವರಿ ಯೋಜನೆ 50.57ಕೋಟಿ ರೂ. ಅಂದಾಜು ವೆಚ್ಚದ ಕರ್ನಾಳ ಏತ ನೀರಾವರಿ ಯೋಜನೆಗೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕ್ಯಾಬಿನೆಟ್ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿರುವುದಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ ಅವರು, ತಾಲೂಕಿನ ಕರ್ನಾಳ ಏತ ನೀರಾವರಿ ಯೋಜನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಈ ಕುರಿತು ಕಾನೂನು ಸಚಿವ ಹೆಚ್. ಕೆ.ಪಾಟೀಲ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.ಅಂದಾಜು ಮೊತ್ತ 50.57 ಕೋಟಿ ರೂ. ವೆಚ್ಚದ ಈ ಯೋಜನೆಗೆ ಅನುಮೋದನೆ ನೀಡಿರುವ ಕುರಿತು ತಿಳಿಸಿದ ಸಚಿವರು ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಎಡದಂಡೆ ಕಾಲುವೆ ಜಾಲದ ವ್ಯಾಪ್ತಿಯಲ್ಲಿನ ಶಹಾಪುರ ಶಾಖಾ ಕಾಲುವೆ(ಎಸ್‌ಬಿಸಿ) ಜಾಲದಲ್ಲಿಯ ವಿತರಣಾ ಕಾಲುವೆ 6ರ ಅಡಿಯ ಲ್ಯಾಟರಲ್ ಸಂಖ್ಯೆ 27ರ ಆಫ್ ಟೇಕ್ ನಂತರ ಬರುವ ವಿತರಣಾ ಕಾಲುವೆ ಸಂಖ್ಯೆ 6ರ ಟೇಲ್ ಎಂಡ್ ರೀಚ್ ವ್ಯಾಪ್ತಿಯಲ್ಲಿ ನೀರಾವರಿ ವಂಚಿತ ಕಾಲುವೆ ಜಾಲದಡಿ 2,085 ಹೆಕ್ಟರ್ (ಅಂದಾಜು 5200 ಎಕರೆ) ಅಚ್ಚುಕಟ್ಟು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಒದಗಿಸಲಿದೆ ಎಂದಿದ್ದಾರೆ.ನೀರಾವರಿ ವಂಚಿತ ಕಾಲುವೆ ಕೊನೆ ಭಾಗದ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಈ ಯೋಜನೆ ಹಲವು ವರ್ಷಗಳ ಕನಸಾಗಿತ್ತು. ಅದರಲ್ಲೂ ನಮ್ಮ ತಂದೆ ದಿ.ರಾಜಾ ವೆಂಕಟಪ್ಪ ನಾಯಕ ಅವರ ಕನಸಿನ ಕೂಸಾಗಿದ್ದ ಈ ಯೋಜನೆಗೆ ಕ್ಯಾಬಿನೆಟ್ ಸಭೆಯಲ್ಲಿ ಅನುಮೋದನೆ ದೊರಕಿರುವುದು ಸಂತೋಷ ತಂದುಕೊಟ್ಟಿದೆ. ಈ ಯೋಜನೆ ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲು ಸತತ ಪ್ರಯತ್ನ ಮಾಡುತ್ತೇನೆ ಆ ಮೂಲಕ ನೀರಾವರಿ ವಂಚಿತ ಗ್ರಾಮಗಳ ರೈತರ ಸಾವಿರಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಪಡೆಯಲು ಶ್ರಮಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದಕ್ಕಾಗಿ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ನೀರಾವರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

