ಇಂದು ರಂಗೇರಲಿದೆ ಕಲಬುರಗಿ ವಿಭಾಗ ಮಟ್ಟದ ಖೋ ಖೋ ಕ್ರೀಡಾಕೂಟ
ಸುರಪುರ ಟೈಮ್ಸ್ ವಾರ್ತೆ
ಸುರಪುರ :ಗ್ರಾಮೀಣ ಕ್ರೀಡೆಯಾದ ಖೋ ಖೋ ಇಂದು ರಾಷ್ಟ ಮತ್ತು ಅಂತರಾಷ್ಟೀಯ ಮಟ್ಟದಲ್ಲಿಯೂ ಹೆಚ್ಚು ಜನಪ್ರಿಯತೆ ಗಳಿಸಿದೆ. ಎಲ್ಲ ಶಾಲೆಗಳಲ್ಲಿ ಖೋ ಖೋ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಕ್ರೀಡೆಯಾಗಿದೆ. ಸುರಪುರ ತಾಲೂಕು ಕೂಡ ಖೋ ಖೋ ಕ್ರೀಡೆಗೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಇಲ್ಲಿಯ ಖೋ ಖೋ ಆಟಗಾರರು ರಾಜ್ಯ ಮತ್ತು ರಾಷ್ಟಮಟ್ಟದವರೆಗೂ ಉತ್ತಮ ಪ್ರದರ್ಶನ ನೀಡಿ ಮಿಂಚಿ ತಾಲೂಕಿಗೆ ಕೀರ್ತಿ ತಂದಿರುತ್ತಾರೆ. ಖೋ ಖೋ ಆಟ ಎಂದರೆ ಸಾಕು ಎಲ್ಲರೂ ನಿಂತು ನೋಡುವ ಕ್ರೀಡೆ. ಅಂತಹದೊಂದು ದೊಡ್ಡ ಮಟ್ಟದ ಕ್ರೀಡಾಕೂಟ ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ಇಂದು ರಂಗೇರಲಿದೆ.ಆಟಗಳನ್ನು ಕಣ್ತುಂಬಿಕೊಳ್ಳಲು ಕ್ರೀಡಾಸಕ್ತರು ಸೇರಿ ಅನೇಕರು ಉತ್ಸುಕರಾಗಿದ್ದಾರೆ.
ಇಂದು ನಡೆಯಲಿರುವ ಕಲಬುರಗಿ ವಿಭಾಗ ಮಟ್ಟದ ಖೋ ಖೋ ಕ್ರೀಡಾಕೂಟಕ್ಕೆ ತಾಲೂಕು ಕ್ರೀಡಾಂಗಣ ಸಜ್ಜಾಗಿದೆ. ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಚಾಲನೆ ನೀಡಲಿದ್ದು, ಶಾಸಕಾ ರಾಜಾ ವೇಣುಗೋಪಾಲ ನಾಯಕ ಅಧ್ಯಕ್ಷ ವಹಿಸಲಿದ್ದಾರೆ. ಕಲಬುರಗಿ, ಯಾದಗಿರಿ ಜಿಲ್ಲೆಯ ಸಂಸದರು, ಶಾಸಕರು, ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಇಲ್ಲಿಯ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ 2025-26ನೇ ಸಾಲಿನ ಕಲಬುರಗಿ ವಿಭಾಗ ಮಟ್ಟದ 14/17 ವಯೋಮಿತಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ಖೋ ಖೋ ಕ್ರೀಡಾಕೂಟಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಮತ್ತು ದೈಹಿಕ ಶಿಕ್ಷಕರು ಈಗಾಗಲೇ ಸಕಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಕಳೆದೊಂದು ವಾರದಿಂದ ದೈಹಿಕ ಶಿಕ್ಷಕರ ಸಂಘದ ಸದಸ್ಯರು ಕ್ರೀಡಾಂಗಣದಲ್ಲಿ ಖೋ ಖೋ ಅಂಕಣಗಳ (ಕೋಟ್) ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸಿದ್ದಾರೆ. ಅತ್ಯುತ್ತಮವಾದ ಅಂಕಣಗಳನ್ನು ನಿರ್ಮಾಣ ಮಾಡಿದ್ದಾರೆ. ಆಟಗಾರರಿಗೆ ಯಾವುದೇ ರೀತಿ ತೊಂದರೆಯಾಗದ ರೀತಿಯಲ್ಲಿ ಮೈದಾನ ಸಜ್ಜುಗೊಳಿಸಿದ್ದಾರೆ.
ಅವಿಸ್ಮರಣೀಯ ಕ್ರೀಡಾಕೂಟಕ್ಕೆ ಒಂದು ಉತ್ತಮ ವೇದಿಕೆ ನಿರ್ಮಾಣ ಮಾಡುವ ಸಂಕಲ್ಪ ಹೊಂದಿರುವ ಶಿಕ್ಷಣ ಇಲಾಖೆ ಪೂರ್ವಸಿದ್ಧತಾ ಸಭೆಗಳ ಮೂಲಕ ಕ್ರೀಡಾಕೂಟಕ್ಕೆ ಸರ್ವ ಸಿದ್ಧತೆ ಮಾಡಿಕೊಂಡಿದೆ. ಡಿಡಿಪಿಐ ಚನ್ನಬಸಪ್ಪ ಮುಧೋಳ ಅವರು ಕಳೆದ ನಾಲ್ಕೂ ದಿನಗಳಿಂದ ಸುರಪುರಕ್ಕೆ ಬಂದು ಮೇಲಿಂದ ಮೇಲೆ ಎಲ್ಲ ಸಿದ್ಧತೆಗಳನ್ನು ಕುಲಂಕುಷವಾಗಿ ಪರಿಶೀಲಿಸಿ ಸಂಬಂಧಿಸಿದವರಿಗೆ ಸೂಕ್ತವಾದ ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ.
ಅವರ ಜತೆಯಲ್ಲಿ ಸುರಪುರ ಬಿಇಒ ಯಲ್ಲಪ್ಪ ಕಾಡ್ಲೂರು ಮತ್ತು ತಾಲೂಕಿನ ಶಿಕ್ಷಕವೃಂದದವರು ಯಶಸ್ವಿ ಕ್ರೀಡಾಕೂಟ ಆಯೋಜನೆಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಗುರುವಾರ ಸಂಜೆಯಿAದ ವಿವಿಧ ಜಿಲ್ಲೆಗಳ ಖೋ ಖೋ ಆಟಗಾರರು ಕ್ರೀಡಾಕೂಟದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ್ದರು. ಅವರಿಗೆ ನೋಂದಣಿ, ವಸತಿ, ಊಟ ಇನ್ನಿತರ ವ್ಯವಸ್ಥೆಯನ್ನು ಕಲ್ಪಿಸುವುದರಲ್ಲಿ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕರು ನಿರತರಾಗಿರುವುದು ಕಂಡು ಬಂತು. ಒಟ್ಟಾರೆ ಕಲಬುರಗಿ ವಿಭಾಗೀಯ ಮಟ್ಟದ ಕ್ರೀಡಾಕೂಟದ ಖೋ ಖೋ ಪಂದ್ಯಗಳ ವಿಕ್ಷಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ.




