ರೈತರಿಗೆ ವರುಣಾಘಾತ |ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಅನ್ನದಾತ, ವರುಣನ ಅಬ್ಬರ ಭತ್ತ ಬೆಳೆಗಾರ ತತ್ತರ, ಬೆಳೆ ಪರಿಹಾರ ನೀಡಲು ಆಗ್ರಹ

ಸುರಪುರ ಟೈಮ್ಸ್ ವಾರ್ತೆ

ಸುರಪುರ :ಕಳೆದ ಐದಾರು ದಿನಗಳಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಬಿತ್ತನೆ ಮಾಡಿರುವ ನೂರಾರು ಎಕರೆ ಭತ್ತ ಹಾನಿಯಾಗಿದೆ.ಮಾರುಕಟ್ಟೆಯಲ್ಲೂ ಭತ್ತದ ಬೆಲೆ ಇಳಿಕೆ ಕಂಡಿದ್ದರಿಂದ ರೈತರು ಎದುರಿಸಬೇಕಾದ ಪರಿಸ್ಥಿತಿನಿರ್ಮಾಣವಾಗಿದೆ. ನಾರಾಯಣಪೂರ ಜಲಾಶಯದ ಎಡದಂಡ ಕಾಲುವೆ ಹಾಗೂ ಕೃಷ್ಣಾ ನದಿಯ ಅಚ್ಚುಕಟ್ಟು ಪ್ರದೇಶಕ್ಕೆ ಹೊಂದಿರುವ ಸುರಪುರ ಹುಣಸಗಿ ತಾಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಬೆಳೆಯಲಾಗುತ್ತದೆ. ಮುಂಗಾರಿನಲ್ಲಿ ಸೋನಾ ಮಸೂರಿ, ಐಆರ್ 14, ಕಾವೇರಿ ಸೋನಾ ಬೆಳೆದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಹೇಳಿಕೊಳ್ಳುವ ಮಟ್ಟದಲ್ಲಿ ಭತ್ರಕ್ಕೆ ರೋಗಗಳು ಕಾಣಿಸಿಕೊಳ್ಳದೆ ಇದ್ದರಿಂದ ರೈತರು ಸಂತಸದಲ್ಲಿ ಇದ್ದರು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಕಳೆದ ಒಂದು ವಾರದಿಂದ ಸತತ ಗಾಳಿ, ಮಳೆಗೆ ಕಟಾವು ಹಂತಕ್ಕೆ ಬಂದಿರುವ ಭತ್ತದ ಬೆಳ ನೆಲಕ್ಕೆ ಬಿದ್ದಿದೆ. ಭತ್ತದ ಗದ್ದೆಯಲ್ಲಿ ಕಾಳುಗಳು ಮೊಳಕ ಹೊಡೆಯುವ ಹಂತಕ್ಕೆ ತಲುಪಿವೆ.

ಮಳೆ ಗಾಳಿಗೆ ತಾಲೂಕಿನಾದ್ಯಂತ ಭತ್ತದ ಬೆಳೆ ನೆಲ ಕಚ್ಚಿದ್ದು ಇದರಿಂದ ರೈತರು ಹಾನಿ ಅನುಭವಿಸುವಂತಾಗಿದೆ. ರೈತರು ಪ್ರತಿವರ್ಷ ಒಂದಲ್ಲ ಒಂದು ರೀತಿಯ ಸಂಕಷ್ಟಕ್ಕೆ ಸಿಲುಕುತ್ತಲೆ ಬಂದಿದ್ದು ಆದರೆ ಈ ಭಾರಿ ಉತ್ತಮ ಮಳೆ ಸುರಿದ ಪರಿಣಾಮ ತಾಲೂಕಿನಲ್ಲಿ ಭತ್ತದ ಬೆಳೆದ ರೈತರು ಉತ್ತಮ ಇಳುವರಿ ಹೊಂದಬಹುದು ಎಂಬ ಆಶಾಭಾವನೆಯಲ್ಲಿದ್ದರು. ಆದರೆ ಇದೀಗ ಭತ್ತದ ಬೆಳೆಯೂ ಕಟಾವ್‌ ಹಂತದಲ್ಲಿರುವಾಗಲೇ ಕಳೆದ ಐದಾರು ದಿನಗಳಿಂದ ಸತತ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಬಿತ್ತನೆ ಮಾಡಿರುವ ನೂರಾರು ಎಕರೆ ಭತ್ತ ಗಾಳಿಯೊಂದಿಗೆ ಮಳೆ ಸುರಿಯುತ್ತಿರುವುದರಿಂದ ಭತ್ತದ ಬೆಳೆ ನೆಲಕಚ್ಚಿದೆ. ಕೆಲವೆಡೆ ಅರ್ಧದಷ್ಟು ನೆಲ ಕಚ್ಚಿದ್ದರೆ ಮತ್ತಷ್ಟು ಕಡೆ ಸಂಪೂರ್ಣ ಬೆಳೆ ನೆಲಕ್ಕುರುಳಿದೆ.
ಮಾರುಕಟ್ಟೆಯಲ್ಲೂ ಭತ್ತದ ಬೆಲೆ ಇಳಿಕೆ ಕಂಡಿದ್ದರಿಂದ ರೈತರು ಎದುರಿಸಬೇಕಾದ ಪರಿಸ್ಥಿತಿನಿರ್ಮಾಣವಾಗಿದೆ.

ನೆಲಕ್ಕುರುಳಿದ ಫಸಲು

ಹವಾಮಾನ ವೈಪರೀತ್ಯದಿಂದಾಗಿ ತಾಲೂಕಿನ ಬೋನಾಳ ಚಿಕ್ಕನಹಳ್ಳಿ ವಾಗಣಿಗೇರಾ ಜಾಲಿಬೆಂಚಿ ತಳವರಗೇರಾ ದೇವಾಪುರ ಸೇರಿದಂತೆ ನಾನಾ ಗ್ರಾಮಗಳಲ್ಲಿನ ನೂರಾರು ಎಕರೆ ಭತ್ತ ಮಳೆಯಿಂದ ನೆಲಕ್ಕೆ ಬಿದ್ದಿದೆ. ರೈತರು ಶ್ರಮ ವಹಿಸಿ ಬೆಳೆಸಿದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.

ಬೆಲೆ ಇಳಿಕೆಯ ಆಂತಕ

ಭತ್ತ ಕಟಾವು ಹಂತಕ್ಕೆ ಬಂದಿದ್ದು, ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದಿರುವ ಕಾರಣಕ್ಕೆ ರೈತರು ಸಂತಸ ಪಟ್ಟಿದ್ದರು. ಆದರೆ ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಒಂದೇ ದಿನದಲ್ಲಿ ಭತ್ತದ ಬೆಲೆಯಲ್ಲಿ 300 ರೂ. ಇಳಿಕೆ ಕಂಡಿದೆ. ಮಳೆ ಸುರಿಯುವ ಮುಂಚಿತ ಪ್ರತಿ ಕ್ವಿಂಟಲ್ ಆರ್ ಎನ್ ಆರ್ ಭತ್ತ 2,000 ರೂ. ದರ ನಿಗದಿಯಾಗಿತ್ತು. ಸದ್ಯ 1,650 ರಿಂದ 1,700 ರೂ.ಗೆ ಇಳಿಕೆಯಾಗಿದೆ. ಸೋನಾ ಮಸೂರಿ ಕ್ವಿಂಟರ್ 1,800 ರೂ.ಗೆ ನಿಗದಿಯಾಗಿದ್ದು, ಸದ್ಯ 1,700 ರೂ.ಗೆ ಖರೀದಿ ಮಾಡಲಾಗುತ್ತಿದೆ. ಐ ಆರ್ 64 ಪ್ರತಿ ಕ್ವಿಂಟಲ್ ಗೆ 1,700 ರೂ.ನಿಂದ 1600-1550 ರೂ.ಗೆ ಇಳಿಕೆ ಆಗಿದೆ

ಕಟಾವ್‌ಗೆ ಹೆಚ್ಚು ಹಣವ್ಯಯ

ಕಳೆದ ಕೆಲವು ದಿನಗಳಿಂದ ಸಂಜೆ ವೇಳೆ ಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ಭತ್ತದ ಬೆಳೆ ಮಕಾಡೆ ಮಲಗಿದೆ. ಇದರಿಂದ ಭತ್ತದ ಬೆಳೆ ಕಟಾವ್‌ಗೆ ತೊಂದರೆಯಾಗುತ್ತದೆ ಹಾಗೂ ಭತ್ತದ ಬೆಳೆ ನೆಲ ಕಚ್ಚಿದ ಪರಿಣಾಮ ಕಟಾವ್‌ಗೆ ಹೆಚ್ಚು ಹಣವ್ಯಯ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.ಮಳೆ ಗಾಳಿಗೆ ಭತ್ತ ನೆಲ ಕಚ್ಚಿರುವುದರಿಂದ ಕಟಾವ್‌ ಮಾಡುವ ವೇಳೆ ಭತ್ತದ ಕಾಳು ಉದುರುತ್ತವೆ. ಇದರಿಂದ ರೈತರು ಹಾನಿ ಅನುಭವಿಸಬೇಕಾಗುತ್ತದೆ. ನಿಂತ ಬೆಳೆಯಾದರೆ ಕಟಾವ್‌ ಮಾಡುವ ವೇಳೆ ಭತ್ತದ ಕಾಳು ಉದುರುವುದಿಲ್ಲ ಮಳೆಗಾಳಿಗೆ ನೆಲ ಕಚ್ಚಿದ ಭತ್ತದ ಗೀಡಗಳು ಒಂದರಮೇಲೊಂದು ಸುತ್ತುವರಿದು ಬೀಳುವುದರಿಂದ ಕಟಾವ್‌ ಮಾಡುವಾಗ ಭತ್ತದ ಕಾಳು ಉದುರುತ್ತವೆ.


ಮೋಳಕೆಯೋಡೆಯುವ ಆತಂಕ

ಭತ್ತದ ಬೆಳೆ ನೆಲಕಚ್ಚಿದ ನಂತರ ಭತ್ತದ ಗಿಡಗಳಲ್ಲಿರುವ ಕಾಳು ನೆಲಕ್ಕೆ ತಾಗಿರುತ್ತವೆ. ತೇವಾಂಶವಿರುವ ಮಣ್ಣಿಗೆ ಒಣಗಿದ ಭತ್ತದ ಕಾಳು ಹತ್ತಾರು ದಿನಗಳ ಕಾಲ ತಾಗಿಕೊಂಡಿದ್ದರೆ ನೆಲಕ್ಕೆ ಬಿದ್ದಿರುವ ಭತ್ತ ಅಲ್ಲಿಯೆ ಮೋಳಕೆಯೊಡೆಯುತ್ತದೆ. ಭತ್ತದ ಬೆಳೆ ನೆಲ ಕಚ್ಚಿದ ನಂತರ ಮೂರ್ನಾಲ್ಕು ದಿನಕ್ಕೋಮ್ಮೆ ಮಳೆಯಾಗುತ್ತಿದ್ದರೆ ಕಟಾವ್‌ಗೆ ತೊಂದರೆಯಾಗುವುದರ ಜತೆಗೆ ಭತ್ತ ಮೊಳಕೆಯೊಡೆಯುತ್ತವೆ. ಇದರಿಂದ ರೈತರು ಹಾನಿ ಅನುಭವಿಸಬೇಕಾಗುತ್ತದೆ.

ಬೆಳೆ ಇದ್ದರೆ ಬೆಲೆ ಇರುವುದಿಲ್ಲ, ಬೆಲೆ ಇದ್ದಾಗ ಬೆಳೆ ಇರುವುದಿಲ್ಲ ಎರಡು ಇದ್ದಾಗ ಪ್ರಕೃತಿ ಮುನಿಸಿನಿಂದ ರೈತರು ಹಾನಿ ಅನುಭವಿಸುತ್ತಾರೆ. ಈ ಭಾರಿ ಮಳೆ, ಬೆಳೆ, ಬೆಲೆ ಎಲ್ಲವೂ ಉತ್ತಮವಾಗಿತ್ತು. ಇದೀಗ ಕೊನೆ ಹಂತದಲ್ಲಿ ಮಳೆ ಸುರಿಯುತ್ತಿರುವುದರಿಂದ ಭತ್ತದ ಬೆಳೆಗಾರರು ಹಾನಿ ಅನುಭವಿಸುವಂತಾಗಿದೆ.
ಸೂಕ್ತ ಪರಿಹಾರ ನೀಡಲಿ
ಭತ್ತ ಬೆಳೆದ ರೈತನ ಬದುಕು ಹೇಳತೀರದಾಗಿದೆ. ಬೆಳೆ ಬೆಳೆಯಲು ಖರ್ಚು ಮಾಡಿದ ಹಣ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಇಷ್ಟೆಲ್ಲ ನಷ್ಟವಾದರೂ ಯಾವ ಅಧಿಕಾರಿಗಳೂ ಸ್ಪಂದಿಸಿಲ್ಲ. ರೈತರ ಕಷ್ಟ ನೋವು ಕಂಡು ಸರ್ಕಾರ ಸೂಕ್ತ ಪರಿಹಾರ ನೀಡಲಿ ಎಂದು ಬೋನ್ಹಾಳ ಗ್ರಾಮದ ಯುವ ರೈತ ಸಿದ್ದನಗೌಡ ಬೆಳ್ಳಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!