‘ಪುರಾಣ ಶ್ರವಣದಿಂದ ಪುಣ್ಯ ಪ್ರಾಪ್ತಿ’ :ಜಾಗಟಗಲ್ ಮೇಗಿನಮಠದ ರಾಚಯ್ಯಪ್ಪ ತಾತಾ

ಸುರಪುರ ಟೈಮ್ಸ್ ವಾರ್ತೆ
ಸುರಪುರ:‘ಕಲಿಯುಗದಲ್ಲಿ ಪುರಾಣ ಪ್ರವಚನ ಮತ್ತು ಶ್ರವಣಕ್ಕೆ ಹೆಚ್ಚು ಪ್ರಾಶಸ್ತ್ಯ ಇದೆ. ಪುರಾಣ ಶ್ರವಣದಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ಜಾಗಟಗಲ್ ಮೇಗಿನಮಠದ ರಾಚಯ್ಯಪ್ಪ ತಾತಾ ಹೇಳಿದರು.
ತಾಲ್ಲೂಕಿನ ಮುಷ್ಠಹಳ್ಳಿ ಗ್ರಾಮದಲ್ಲಿ ಗೂಳಿಬಸವೇಶ್ವರ ಜಾತ್ರೆಯ ಅಂಗವಾಗಿ ಸೋಮವಾರ ಏರ್ಪಡಿಸಿರುವ ಗುರು ಸಿದ್ದಾರೂಢರ ಪುರಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಈ ಯುಗದಲ್ಲಿ ಭಗವಂತನ ಸಾಕ್ಷಾತ್ ದರ್ಶನವಿಲ್ಲ. ಆದರೆ ಆತನ ಮೊರೆ ಹೋದರೆ ದರ್ಶನದ ಅನುಭವವಾಗುತ್ತದೆ. ಆಧ್ಯಾತ್ಮದ ಮಾರ್ಗದಲ್ಲಿ ನಡೆದರೆ ಇಷ್ಟಾರ್ಥಗಳು ಸಿದ್ಧಿಸುತ್ತವೆ’ ಎಂದರು.
‘ಪುರಾಣ ಜಗತ್ತನ್ನು ಬೆಳಗಿಸುವ ಸಾಧನ. ಧಾರ್ಮಿಕತೆಯಲ್ಲಿ ನಂಬಿಕೆ ಇಟ್ಟು ಮುನ್ನಡೆದರೆ ಸನ್ಮಾರ್ಗಯಾಗುತ್ತದೆ. ಭಕ್ತಿ ಭಾವನೆಯೂ ಮೂಡುತ್ತದೆ’ ಎಂದು ತಿಳಿಸಿದರು.
‘ಮುಷ್ಠಹಳ್ಳಿಯ ಗೂಳಿ ಬಸವೇಶ್ವರ ಕಲಿಯುಗದ ಕಾಮಧೇನು. ಅನೇಕ ಪವಾಡಗಳು ನಡೆದಿವೆ. ನಿಷ್ಠೆಯಿಂದ ನಡೆದುಕೊಂಡವರ ಅಭಿಷ್ಠೆಗಳು ಈಡೇರಿವೆ. ಸುತ್ತಮುತ್ತಲಿನ ಭಕ್ತರು ದರ್ಶನ ಪಡೆಯುತ್ತಿರುವುದು ಇದಕ್ಕೆ ಸಾಕ್ಷಿ’ ಎಂದರು.
ಪುರಾಣ ಪ್ರವಚನ ನೀಡಿದ ಮದ್ಲಾಪುರ ರುದ್ರಯ್ಯಶಾಸ್ತ್ರಿ ‘ಸಿದ್ಧಾರೂಢರು ತಮ್ಮ 7ನೇ ವಯಸ್ಸಿನಲ್ಲಿ ಮನೆಯನ್ನು ತ್ಯಜಿಸಿದರು. ಗಜದಾಸ್ವಾಮಿ ಎಂಬುವವರಲ್ಲಿ ಸನ್ಯಾಸ ಸ್ವೀಕರಿಸಿದರು. ತಮ್ಮ ಜ್ಞಾನದಿಂದ ಭರತ ಭೂಮಿಯನ್ನು ಜ್ಞಾನ ಭೂಮಿಯನ್ನಾಗಿಸಿದರು’ ಎಂದು ತಿಳಿಸಿದರು.
‘ಸಿದ್ಧಾರೂಢರು ಆಧ್ಯಾತ್ಮದ ನಂದಾದೀಪ. ಅವರು ಅನೇಕ ವಿಧ್ವಾಂಸರ ಜೊತೆ ಆಧ್ಯಾತ್ಮ ಚರ್ಚೆ ನಡೆಸಿದರು. ಗುರು ಉಪದೇಶದಿಂದ ಅಜ್ಞಾನವನ್ನು ನಾಶಪಡಿಸಿ ಆತ್ಮ ಸುಖವನ್ನುಂಟು ಮಾಡುವುದು ಉಪನಿಷತ್ ಎಂದು ವಾದಿಸಿ ವಿಧ್ವಾಂಸರು ಹುಬ್ಬೇರುವಂತೆ ಮಾಡಿದರು’ ಎಂದು ಹೇಳಿದರು.
ನ. 26 ರವರೆಗೆ ಪ್ರತಿ ದಿನ ಸಂಜೆ ಪುರಾಣ ಪ್ರವಚನ ಆಯೋಜಿಸಲಾಗಿದೆ. ಗ್ರಾಮವಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪುರಾಣ ಶ್ರವಣ ಮಾಡುತ್ತಿದ್ದಾರೆ.

ಜಾಗಟಗಲ್ ಸಣ್ಣಯ್ಯಪ್ಪ ತಾತಾ ಮೇಗಿನಮಠ, ಬೆಟ್ಟಯ್ಯಪ್ಪ ತಾತಾ ಮೇಗಿನಮಠ ಉಪಸ್ಥಿತರಿದ್ದರು. ರಾಜಶೇಖರ ಹುಲ್ಲೂರ ಹಾರ್ಮೋನಿಯಂ ಸಾಥ್ ನೀಡಿದರು. ಬಸವರಾಜ ವಂದಲಿ ತಬಾಲಾ ಸಾಥ್ ನೀಡಿದರು.

ಸುರಪುರ ತಾಲ್ಲೂಕಿನ ಮುಷ್ಠಹಳ್ಳಿ ಗ್ರಾಮದಲ್ಲಿ ಸೋಮವಾರ ಸಿದ್ದಾರೂಢರ ಕುರಿತು ಪುರಾಣ ಪ್ರವಚನ ಆರಂಭವಾಯಿತು

Leave a Reply

Your email address will not be published. Required fields are marked *

error: Content is protected !!