ಧರ್ಮಸ್ಥಳ ಸಂಸ್ಥೆಯಿಂದ ಅಶಕ್ತರಿಗೆ ಶಕ್ತಿ ನೀಡುವ ‘ವಾತ್ಸಲ್ಯ’ ಯೋಜನೆ:ನಿಂಗಪ್ಪನಾಯಕ ಬಿಜಾಸಪುರ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಬಿಜಾಸಪುರ ಗ್ರಾಮದ ನಿರ್ಗತಿಕ ಮಹಿಳೆ ಹನುಮಂತಿ ಚಂದಪ್ಪ ಅವರಿಗೆ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್ ವತಿಯಿಂದ ವಾತ್ಸಲ್ಯ ಯೋಜನೆ ಅಡಿಯಲ್ಲಿ ಮನೆ ಮಂಜೂರಿಯಾಗಿತ್ತು.
ಮಂಗಳವಾರ ಮನೆಗೆ ಮುಖಂಡ ನಿಂಗಪ್ಪನಾಯಕ ಬಿಜಾಸಪುರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ‘ಧರ್ಮಸ್ಥಳ ಸಂಸ್ಥೆ ತಾಲ್ಲೂಕಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ನಿರ್ಗತಿಕರಿಗೆ ಸೂರು ಒದಗಿಸುವ, ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ, ಕೆಟ್ಟ ವ್ಯಸನಗಳನ್ನು ಬಿಡಿಸಿ ಮುಖ್ಯವಾಹಿನಿಗೆ ತರುವ ಅತ್ಯದ್ಭುತ ಕಾರ್ಯ ಮಾಡುತ್ತಿದೆ’ ಎಂದು ಪ್ರಶಂಸಿಸಿದರು.
ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ನಾಗೇಶ ಮಾತನಾಡಿ, ‘ಈಗಾಗಲೇ ತಾಲ್ಲೂಕಿನಲ್ಲಿ ಹಲವು ನಿರ್ಗತಿಕರಿಗೆ ಸಂಸ್ಥೆ ವತಿಯಿಂದ ಉಚಿತವಾಗಿ ಮನೆ ನಿರ್ಮಿಸಿ ಕೊಡಲಾಗಿದೆ. ಬಡವರನ್ನು. ಮಹಿಳೆಯರನ್ನು ಆರ್ಥಿಕವಾಗಿ ಮುಂದೆ ತರುವ ಕಾರ್ಯಕ್ರಮಗಳು ನಡೆಯುತ್ತಿವೆ’ ಎಂದರು.ಜ್ಞಾನವಿಕಾಸ ಸಮಿತಿ ಅಧಿಕಾರಿ ಅನಿತಾ, ಸೇವಾ ಪ್ರತಿನಿಧಿ ರಾಘಮ್ಮ, ರೆಡ್ಡಿಗೌಡ, ಮಡಿವಾಳಪ್ಪ, ಮಲ್ಲಪ್ಪ ಶ್ರೀನಿವಾಸಪುರ, ಫಲಾನುಭವಿ ಹನುಮಂತಿ ಇತರರು ಉಪಸ್ಥಿತರಿದ್ದರು.

