ನರೇಗಾ ಯೋಜನೆಯ ಸದುಯೋಗ ಪಡೆದುಕೊಳ್ಳಲು ಸಾರ್ವಜನಿಕರಲ್ಲಿ ಮನವಿ; ಸಿಬಿ ದೇವರಮನಿ

ಸುರಪುರ ಟೈಮ್ಸ್ ವಾರ್ತೆ

ಸುರಪುರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅಕುಶಲ ಕೂಲಿ ಕೆಲಸ ಮಾಡಲು ಇಚ್ಚಿಸುವ ಗ್ರಾಮೀಣ ಪ್ರದೇಶದ ಕೂಲಿಕಾರರ, ಕೂಲಿ ಕೆಲಸದ ಬೇಡಿಕೆಯ ಅರ್ಜಿ ನಮೂನೆ-6ಅನ್ನು ಸ್ವೀಕರಿಸಲು ತಾಲೂಕ ಪಂಚಾಯಿತಿ ಹಾಗೂ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕೂಲಿ ಬೇಡಿಕೆ ಸ್ವೀಕೃತಿ ಕೇಂದ್ರಗಳನ್ನು ಆರಂಭಿಸಲಾಗಿದೆ ಅದರ ಸದುಯೋಗ ಪಡೆದುಕೊಳ್ಳಲು ಸಾರ್ವಜನಿಕರಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಶ್ರೀ ಸಿಬಿ ದೇವರಮನಿ ಅವರು ಮನವಿ ಮಾಡಿದ್ದಾರೆ.

ನಗರದ ತಾಲೂಕ ಪಂಚಾಯಿತಿಯಲ್ಲಿ ಮಾಚ್೯ 7ರಂದು ಸ್ಥಾಪಿಸಿದ ಮಹಾತ್ಮಗಾಂಧಿ ನರೇಗಾ ಯೋಜನೆ ಕೂಲಿ ಬೇಡಿಕೆ ಕೇಂದ್ರಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಬೇಸಿಗೆ ಆರಂಭವಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿಗೆ ರೈತರ ಕೃಷಿ ಚಟುವಟಿಕೆಗಳು ಕಡಿಮೆ ಆಗುತ್ತಿವೆ, ಹೀಗಾಗಿ, ಗ್ರಾಮೀಣ ಕೃಷಿ ಕೂಲಿಕಾರರು ತಮ್ಮ ಜೀವನ ಹಾಗೂ ಕುಟುಂಬಗಳ ನಿರ್ವಹಣೆ, ಜೀವನೋಪಾಯಕ್ಕಾಗಿ ದೂರದ ನಗರ ಪಟ್ಟಣಗಳಿಗೆ ಕೂಲಿ ಕೆಲಸಕ್ಕಾಗಿ ವಲಸೆ ಹೊಗುವುದನ್ನು ತಡೆಯಲು, ಕೂಲಿಕಾರರು ಮಾಡುವ ಅಕುಶಲ ಕೂಲಿ ಕೆಲಸವನ್ನು ಸರಕಾರ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ನೂರು ದಿನಗಳ ಕೂಲಿ ಕೆಲಸದ ಖಾತ್ರಿ ನೀಡಿದೆ. ಕೂಲಿ ಕೆಲಸ ಮಾಡಲು ಬಯಸುವ ಕುಟುಂಬಗಳಿಗೆ ಹಾಗೂ ಕೂಲಿಕಾರರಿಗೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೂಲಿ ಬೇಡಿಕೆಯ ಅರ್ಜಿ ಸಲ್ಲಿಸಿದ 15 ದಿನದೊಳಗೆ ಕೂಲಿ ಕೆಲಸ ಕೊಡಲಾಗುತ್ತದೆ ಎಂದರು.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕಾಗಿ ಅರ್ಜಿ ನಮೂನೆ-6ಅನ್ನು ಸ್ವೀಕರಿಸಲು, ತಾಲೂಕ ಪಂಚಾಯಿತಿ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಕೂಲಿ ಬೇಡಿಕೆ ಸ್ವೀಕೃತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಗ್ರಾಮೀಣ ಕೂಲಿಕಾರರ ಕೂಲಿ ಬೇಡಿಕೆ ಸ್ವೀಕೃತಿ ಕೇಂದ್ರಗಳಲ್ಲಿ ಸ್ವೀಕರಿಸಿದ ಕೂಲಿ ಬೇಡಿಕೆಯ ಅರ್ಜಿಗಳ ಸ್ವೀಕೃತಿ ಹಾಗೂ ವಿಲೇವಾರಿಗೆ ಸಂಬಂದಿಸಿದಂತೆ ಕಡತಗಳ ನಿರ್ವಹಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ, ಸುರಪುರ ತಾಲ್ಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು,ತಾಂತ್ರಿಕ ಸಹಾಯಕರು, ತಾಪಂ ಸಿಬ್ಬಂದಿ ಮತ್ತು ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದೌವಲಸಾಬ ನದಾಫ್ ಹಾಗೂ ಕೂಲಿಕಾರರು ಸೇರಿದಂತೆ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!