ಶಿಡ್ಲಘಟ್ಟ ನಗರಸಭೆ ಪೌರಾಯುಕ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ರಾಜೀವಗೌಡ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಸುರಪುರ ಟೈಮ್ಸ್ ವಾರ್ತೆ
ಶಹಾಪುರ:ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ, ರಾಜೀವಗೌಡ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಂಬಂಧಿಸಿದಂತೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಇಂದು ಮಾನ್ಯ ತಹಸೀಲ್ದಾರರಿಗೆ ಶಹಾಪುರ ನಗರಸಭೆಯ ಪೌರಾಯುಕ್ತ ಜೀವನ ಕುಮಾರ ಕಟ್ಟಿಮನಿ ಅವರು ಒತ್ತಾಯಿಸಿದ್ದರು.
ಅವರು ಇಂದು ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಅಧಿಕಾರಿಗಳಿಗೆ ಅವಮಾನ ಮಾಡುವ ಹಾಗೂ ಅವರ ಗೌರವಕ್ಕೆ ಧಕ್ಕೆ ಉಂಟುಮಾಡುವಂತಹ ವರ್ತನೆ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ. ಇಂತಹ ಘಟನೆಗಳು ಪುನರಾವೃತಿಯಾಗದಂತೆ ಆರೋಪಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಭದ್ರತೆ, ಗೌರವ ಮತ್ತು ಕಾರ್ಯನಿರ್ವಹಣೆಗೆ ಅಡ್ಡಿಯಾಗುವ ಯಾವುದೇ ರೀತಿಯ ವರ್ತನೆಯನ್ನು ಸಹಿಸಲಾಗುವುದಿಲ್ಲ. ಸಂಬಂಧಿಸಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯೋಚಿತ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರರನ್ನು ಅವರು ಮನವಿ ಮೂಲಕ ಕೋರಿದರು.
ಈ ಸಂದರ್ಭದಲ್ಲಿ ನಗರಸಭೆಯ ವಿವಿಧ ವಿಭಾಗಗಳ ಸಿಬ್ಬಂದಿ ಹಾಜರಿದ್ದರು.

