ವಿವೇಕಾನಂದರ ಅಪ್ರತಿಮ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸತ್ಪ್ರಜೆಗಳಾಗಿ ಬಾಳಲು ಸಾಧ್ಯ: ಡಾ. ಯಂಕನಗೌಡ ಎಸ್. ಪಾಟೀಲ

ಸುರಪುರ ಟೈಮ್ಸ್ ವಾರ್ತೆ

ಕೆಂಭಾವಿ: “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯದ ಪುಸ್ತಕಗಳಿಗೆ ಸೀಮಿತವಾಗಬಾರದು. ಅಂಕಗಳಿಕೆ ಎಂಬುದು ಜೀವನದ ಒಂದು ಭಾಗವಷ್ಟೇ, ಆದರೆ ವ್ಯಕ್ತಿತ್ವ ನಿರ್ಮಾಣವೇ ಶಿಕ್ಷಣದ ಅಂತಿಮ ಗುರಿಯಾಗಬೇಕು. ಸ್ವಾಮಿ ವಿವೇಕಾನಂದರ ಅಪ್ರತಿಮ ವಿಚಾರಧಾರೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಸತ್ಪ್ರಜೆಗಳಾಗಿ ಬಾಳಲು ಸಾಧ್ಯ,” ಎಂದು ಪ್ರಖ್ಯಾತ ಉಪನ್ಯಾಸಕ ಡಾ. ಯಂಕನಗೌಡ ಎಸ್. ಪಾಟೀಲ ಅಭಿಪ್ರಾಯಪಟ್ಟರು.

ಸ್ಥಳೀಯ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದರ 164ನೇ ಜಯಂತೋತ್ಸವ ಅಂಗವಾಗಿ “ವಿವೇಕೋತ್ಸವ” ಮತ್ತು ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಪ್ರೇರಣಾದಾಯಕವಾಗಿ ಮಾತನಾಡಿದರು.

ಗ್ರಾಮೀಣ ಭಾಗದ ಜ್ಞಾನ ದೇಗುಲ: 30 ವರ್ಷಗಳ ಸಾರ್ಥಕ ಪಯಣ ಸಂಸ್ಥೆಯ ಶೈಕ್ಷಣಿಕ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಡಾ. ಪಾಟೀಲರು, “ಕಳೆದ ಮೂರು ದಶಕಗಳಿಂದ ಈ ಶಾಲೆಯು ಕತ್ತಲ ಹಾದಿಯಲ್ಲಿದ್ದ ನೂರಾರು ಗ್ರಾಮೀಣ ಕುಟುಂಬಗಳಿಗೆ ಜ್ಞಾನದ ದೀಪ ಹಚ್ಚಿದೆ. ಆಡಳಿತ ಮಂಡಳಿಯ ನಿಸ್ವಾರ್ಥ ಸೇವೆ ಮತ್ತು ಶಿಕ್ಷಕರ ಶ್ರಮದಿಂದಾಗಿ ಈ ಭಾಗದ ಬಡ ಮಕ್ಕಳ ಪಾಲಿಗೆ ಇದು ನಿಜವಾದ ಆಶಾಕಿರಣವಾಗಿದೆ. ಸಂಸ್ಥೆಯು ಶೀಘ್ರದಲ್ಲೇ ಪ್ರೌಢಶಾಲಾ ವಿಭಾಗವನ್ನು ಆರಂಭಿಸಿ ಗ್ರಾಮೀಣ ಪ್ರತಿಭೆಗಳ ಉನ್ನತ ವ್ಯಾಸಂಗಕ್ಕೆ ಆಸರೆಯಾಗಬೇಕು,” ಎಂದು ಆಶಿಸಿದರು.

ಸಂಸ್ಕಾರಯುತ ಶಿಕ್ಷಣಕ್ಕೆ ಆದ್ಯತೆ..:
ಶಾಲೆಯ ಮುಖ್ಯ ಶಿಕ್ಷಕರಾದ ಬಾಬು ಪಟೇಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ನಮ್ಮ ಸಂಸ್ಥೆಯು ಕೇವಲ ಅಕ್ಷರ ಕಲಿಸದೆ ಸಂಸ್ಕಾರವನ್ನು ಕಲಿಸುತ್ತಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಇಂದು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ದೇಶ-ವಿದೇಶಗಳಲ್ಲಿ ಉನ್ನತ ಸ್ಥಾನ ಅಲಂಕರಿಸಿರುವುದು ನಮ್ಮ ಶ್ರಮಕ್ಕೆ ಸಂದ ಗೌರವ,” ಎಂದರು.
ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು
ಜಯಂತೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಗಮನ ಸೆಳೆದವು. ಪುಟ್ಟ ಮಕ್ಕಳು ಸ್ವಾಮಿ ವಿವೇಕಾನಂದರ ವೇಷಧರಿಸಿ ಅವರ ಐತಿಹಾಸಿಕ ಚಿಕಾಗೋ ಭಾಷಣವನ್ನು ಮರುಸೃಷ್ಟಿಸಿದರು. ವಿವೇಕಾನಂದರ ಜೀವನ ಚರಿತ್ರೆಯನ್ನು ಸಾರುವ ಕಿರು ನಾಟಕಗಳು ಮತ್ತು ದೇಶಭಕ್ತಿ ಗೀತೆಗಳ ಗಾಯನವು ನೆರೆದಿದ್ದ ಪೋಷಕರಲ್ಲಿ ರೋಮಾಂಚನ ಉಂಟುಮಾಡಿತು.

ಗಣ್ಯರ ಉಪಸ್ಥಿತಿ ಮತ್ತು ಸನ್ಮಾನ
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಆದಿತ್ಯಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖ ಗಣ್ಯರಾದ ಬಂದೇನವಾಜ್ ಐ. ನಾಲತವಾಡ, ಗಂಗಾಧರ್ ಪತ್ತಾರ್, ಗೌಸ್ ಮೌಲಾನ, ಇಲ್ಯಾಸ್ ನಾಲತವಾಡ, ತಾಹೇರ ಹುಸೇನ್ ಪೇಶಮಾಮ್, ಹಾಗೂ ಇಲ್ಯಾಸ್ ಪಟೇಲ್ ಬಳಗಾನೂರ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ರಾಮಣ್ಣ ಪಾಟೀಲ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಶಾಲಾ ಸಿಬ್ಬಂದಿಗಳಾದ ಮದುಮತಿ, ಅಕ್ಷತಾ, ಮಿಜಬಾ, ಮದೀನಾ, ಮಾಸಾಬಿ ಯಲಗೋಡ ಸ್ವಾಗತಿಸಿದರು, ಸಾನಿಯಾ ನಾಲತವಾಡ ನಿರೂಪಿಸಿದರು, ಭಾರತಿ ಮಾಲೂರ್ಪಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!