ಜ.26ಕ್ಕೆ ಗಣರಾಜ್ಯೋತ್ಸವ ಅರ್ಥಪೂರ್ಣವಾಗಿ ಆಚರಿಸಿ;ಹೆಚ್.ಎ.ಸರಕಾವಸ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಜ.26ರಂದು ತಾಲೂಕಿನಲ್ಲಿ ನಡೆಯಲಿರುವ 77 ನೇ ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ತಹಸೀಲ್ದಾರ್ ಹೆಚ್.ಎ.ಸರಕಾವಸ್ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿಯ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಗಣರಾಜ್ಯೋತ್ಸವ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜ. 25, 26 ರಂದು ಎಲ್ಲ ಸರಕಾರಿ ಕಚೇರಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಬೇಕು. ಗಣರಾಜ್ಯೋತ್ಸವ ದಿನದಂದು ಎಲ್ಲ ಸರಕಾರಿ ಕಚೇರಿ ಮತ್ತು ಶಾಲೆ ಕಾಲೇಜುಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರವಿಟ್ಟು ಪುಷ್ಪ ನಮನ ಸಲ್ಲಿಸಿ ಬೆಳಗ್ಗೆ 7.30 ರೊಳಗೆ ಧ್ವಜಾರೋಹಣ ನೆರವೇರಿಸಬೇಕು ಎಂದರು.
ನಂತರ ನಗರದ ಶ್ರೀ ಪ್ರಭು ಮಹಾ ವಿದ್ಯಾಲಯದ ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ ಗಣರಾಜ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ 8.30 ಗಂಟೆಗೆ ಧ್ವಜಾರೋಹಣ ಜರುಗಲಿದೆ. ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರುತ್ತದೆ. ವಿವಿಧ ರಂಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುವುದು. ಎಲ್ಲ ಅಧಿಕಾರಿಗಳು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಮಯಕ್ಕೆ ಸರಿಯಾಗಿ ಹಾಜಿರಿರಬೇಕು. ಕುಡಿಯುವ ನೀರು, ಅಲ್ಫೋಪಹಾರ, ವೈದ್ಯಕೀಯ, ಭದ್ರತೆ ಸೇರಿ ಇನ್ನಿತರ ವ್ಯವಸ್ಥೆಗಳನ್ನು ಮಾಡಬೇಕು. ಒಟ್ಟಾರೆ ಗಣರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಹಾಗೂ ಅದ್ಧೂರಿಯಾಗಿ ಆಚರಿಸಲಾಗುವುದು ಎಂದರು.
ತಾಪಂ ಇಒ ಬಸವರಾಜ್ ಸಜ್ಜನ್, ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಸಮಾಜ ಕಲ್ಯಾಣ ಇಲಾಖೆ ಎಡಿ ಮೊಹ್ಮದ್ ಸಲೀಂ, ಕೃಷಿ ಇಲಾಖೆ ಎಡಿ ರಾಮನಗೌಡ ಮಾಲಿ ಪಾಟೀಲ್, ಎಸ್‌ಟಿಒ ಸಣಕ್ಕೆಪ್ಪ ಕೊಂಡಿಕಾರ, ಪಿಎಸ್‌ಐ ಶರಣಪ್ಪ ಹವಲ್ದಾರ್, ವಿವಿಧ ಇಲಾಖೆಯ ಅಧಿಕಾರಿಗಳಾದ ಪಂಡಿತ್ ನಿಂಬೂರ್, ಡಾ.ಸುರೇಶ ಹಚ್ಚಡ, ಭೀಮಾಶಂಕರ ನಾಯಕ, ಶಾಸಕರ ಆಪ್ತ ಸಹಾಯಕ ಹಣಮಂತ್ರಾಯ ಮಕಾಶಿ, ಮುಖಂಡರಾದ ಶಿವಮೋನಯ್ಯ ಎಲ್‌ಡಿ ನಾಯಕ ದೇವರಗೋನಾಲ, ಉಸ್ತಾದ್ ವಜಾಹತ್ ಹುಸೇನ್, ಯಲ್ಲಪ್ಪ ಹುಲಿಕಲ್ ಸೇರಿ ಇತರರಿದ್ದರು.








