ಸಮಾನತೆ ಸಾರಿದ ನಿಜ ಶರಣ ಅಂಬಿಗರ ಚೌಡಯ್ಯ;ಹೆಚ್.ಎ.ಸರಕಾವಸ್

ಸುರಪುರ ಟೈಮ್ಸ್ ವಾರ್ತೆ
ಸುರಪುರ :ಸಮಾಜದಲ್ಲಿನ ತಾರತಮ್ಯ ನೀತಿಗಳ ವಿರುದ್ಧ ಹೋರಾಡಿ, ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ತಮ್ಮ ವಚನಗಳ ಮೂಲಕ ಸಮಾನತೆ ಸಾರಿದ ಕಾಯಕ ನಿಷ್ಠೆಯೊಂದಿಗೆ ಜೀವನ ಸಾಗಿಸಿದ ಅಂಬಿಗರ ಚೌಡಯ್ಯ ಹನ್ನೆರಡನೇ ಶತಮಾನದ ಶ್ರೇಷ್ಠ ಶರಣರಾಗಿದ್ದಾರೆ ಎಂದು ತಹಸೀಲ್ದಾರ್ ಹೆಚ್.ಎ.ಸರಕಾವಸ್ ಹೇಳಿದರು.
ಇಲ್ಲಿಯ ಭೋಯಿಗಲ್ಲಿ ಶ್ರೀ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಬುಧವಾರ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ 906 ನೇ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ಜೀವನ ಮೌಲ್ಯವನ್ನು ಸಾರಿ, ಸಮಾಜದ ಏಳಿಗೆಗಾಗಿ ಶ್ರಮಿಸಿದ ಶ್ರೇಷ್ಠ ವಚನಕಾರರಾಗಿದ್ದರು. ತಮ್ಮ ಜ್ಞಾನಾಮೃತವನ್ನು ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
12 ನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲಿಸಿದ ಮಹಾ ಶರಣ. ನುಡಿದಂತೆ ನಡೆದ ಕ್ರಾಂತಿಕಾರಿ ಶರಣ, ನಿಷ್ಟೂರವಾದಿ ಹಾಗೂ ಕಾಯಕ ಯೋಗಿ. ಅಂದು ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಅಸ್ಪಶ್ಯತೆ, ಮೌಢ್ಯತೆ, ಕಂದಾಚಾರಗಳನ್ನು ನಿರ್ಮೂಲನೆಗೆ ಪಣ ತೊಟ್ಟು ಉತ್ತಮ ನಾಗರಿಕ ಸಮಾಜಕ್ಕಾಗಿ ಸಾಕಷ್ಟು ಶ್ರಮಿಸಿದರು ಎಂದು ತಿಳಿಸಿದರು.
ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ ಮಾತನಾಡಿ, ನಿಜ ಶರಣ ಅಂಬಿಗರ ಚೌಡಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಪಾಲಿಸಬೇಕು. ರಾಜ್ಯ ಸರಕಾರ ಇಂದು ಹಲವಾರು ಯೋಜನೆಗಳ ಮೂಲಕ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೋಲಿ ಸಮಾಜದ ಯಾವುದೇ ಬೇಡಿಕೆಗಳಿದ್ದರೆ ಅದನ್ನು ನಮ್ಮ ಸಹೋದರರಾದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಗಮನಕ್ಕೆ ತರಲಾಗುವುದು. ತಾಲೂಕಿನಲ್ಲಿ ಎಲ್ಲೆಲ್ಲಿ ಸಮುದಾಯ ಭವನದ ಅವಶ್ಯಕತೆ ಇದೆ ಅಲ್ಲಿ ನಿರ್ಮಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪತ್ರಾಂಕಿತ ಉಪ ಖಜಾನಾಧಿಕಾರಿ ಸಣಕ್ಕೆಪ್ಪ ಕೊಂಡಿಕಾರ ಉಪನ್ಯಾಸ ನೀಡಿ, ವಿಶ್ವಗುರು ಬಸವಣ್ಣನವರ ಅನುಯಾಯಿಯಾಗಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರು ಶರಣ ಸಂಕುಲದಲ್ಲಿ ತತ್ವ ನಿಷ್ಠ, ತತ್ವಜ್ಞಾನಿ, ವಚನಕಾರರಾಗಿದ್ದರು. ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನು ತಮ್ಮ ವಚನಗಳ ಮೂಲಕ ಹೋಗಲಾಡಿಸಲು ಮತ್ತು ಸಾಮಾಜಿಕ ಪರಿವರ್ತನೆಗಾಗಿ ಶ್ರಮಿಸಿದ ಶ್ರೇಷ್ಠ ಶರಣರಾಗಿದ್ದರು. ಅಂಬಿಗನಾಗಿ ವಚನಗಳನ್ನು ಬರೆದು ವಚನ ಸಾಹಿತ್ಯಕ್ಕೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ಅತಿ ಪ್ರಖರ ವಚನಗಳಿಂದ ಶರಣರ ವಚನ ಕ್ರಾಂತಿಯಲ್ಲಿ ತಮ್ಮದೇ ಛಾಪು ಮೂಡಿಸಿದರು. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಜೊತೆಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು. ಶಿಕ್ಷಣದಿಂದ ಎಲ್ಲ ರಂಗಗಳಲ್ಲಿ ಪ್ರಗತಿ ಸಾಧಿಸಬಹುದು ಎಂದರು.
ತಾಲೂಕು ಕೋಲಿ ಗಂಗಾಮತ ಸಮಾಜದ ದೇವಿಂದ್ರಪ್ಪಗೌಡ ಮಾಲಿ ಪಾಟೀಲ್ ದೇವರಗೋನಾಲ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ಗುತ್ತೇದಾರ್, ನಗರಸಭೆ ಸದಸ್ಯ ಮಾನಪ್ಪ ಚಳ್ಳಿಗಿಡದ, ನಿವೃತ್ತ ಎಸ್‌ಟಿಒ ಶಿವಪ್ಪ ಕಟ್ಟಿಮನಿ ವೇದಿಕೆಯಲ್ಲಿದ್ದರು. ಸಮಾಜದ ಮುಖಂಡರಾದ ಯಂಕಣ್ಣ ಕಟ್ಟಮನಿ, ಹಣಮಂತ ಯಲಗೋಡ, ಮರೆಪ್ಪ ದಾಯಿ, ಭಂಡಾರೆಪ್ಪ ನಾಟೇಕರ್, ವೆಂಕಾರೆಡ್ಡಿ ಬೋಯಿ, ಯಲ್ಲಪ್ಪ ರತ್ತಾಳ, ದೇವಿಂದ್ರಪ್ಪ, ಹಣಮಂತ, ವೆಂಕಟೇಶ ಕವಡಿಮಟ್ಟಿ ಸೇರಿದಂತೆ ಗಂಗಾಮತ ಸಮಾಜದ ಅನೇಕ ಬಾಂಧವರು ಇದ್ದರು. ಸರಕಾರಿ ಅಭಿಯೋಜಕ ನಂದಣ್ಣ ಬಾಕ್ಲಿ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಮಾನಪ್ಪ ಸುಗೂರು ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!