24ಕ್ಕೆ ರಂಗಂಪೇಟೆಯಲ್ಲಿ ವಿರಾಟ ಹಿಂದೂ ಸಮಾವೇಶ; ಡಾ.ಸುರೇಶ ಸಜ್ಜನ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಸಮೀಪದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಜ.24 ರಂದು ಮಧ್ಯಾಹ್ನ ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ವತಿಯಿಂದ ವಿರಾಟ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಮುಖ ಮತ್ತು ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ಸುರೇಶ್ ಸಜ್ಜನ್ ಹೇಳಿದರು.
ಇಲ್ಲಿಯ ಪತ್ರಿಕಾ ಭವನದಲ್ಲಿ ಬುಧವಾರ ಸಮಾವೇಶದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ೮.೩೦ ಗಂಟೆಗೆ ತಿಮ್ಮಾಪುರದ ಬಸ್ ನಿಲ್ದಾಣ ಬಳಿಯ ಹನುಮಾನ ಮಂದಿರದಿಂದ ಮಂಗಲ ಬಜಾರ್, ದೊಡ್ಡ ಬಜಾರ್, ತರಕಾರಿ ಮಾರುಕಟ್ಟೆ ಮಾರ್ಗದ ಮೂಲಕ ವೀರಶೈವ ಕಲ್ಯಾಣ ಮಂಟಪದವರೆಗೆ ಭವ್ಯ ಶೋಭಾ ಯಾತ್ರೆ ನಡೆಯಲಿದೆ. ಖಣಿ ಹಲಗೆ. ಲಂಬಾಣಿ ನೃತ್ಯ. ಡೊಳ್ಳು ವಾದ್ಯ. ಶಹನಾಯಿ ವಾದನ ಸೇರಿದಂತೆ ಜಾನಪದ ಕಲಾವಿದರ ತಂಡಗಳ ಸಂಪ್ರದಾಯಿಕ ನೃತ್ಯದೊಂದಿಗೆ ಯಾತ್ರೆ ಅದ್ಧೂರಿಯಾಗಿ ಜರುಗಲಿದೆ ಎಂದರು.
ನಂತರ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 12 ಗಂಟೆಗೆ ಸಮಾವೇಶ ಆಯೋಜಿಸಲಾಗಿದೆ ಶಹಾಪುರದ ಪೂಜ್ಯ ಸುಗೂರೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಖ್ಯಾತ ವಾಗ್ಮಿ ಹುಬ್ಬಳ್ಳಿಯ ಕಿರಣ ಗುಡ್ಡದಕೇರಿ ರಾಷ್ಟಾಭಿಮಾನ, ಹಿಂದುತ್ವ ಸೇರಿ ಅನೇಕ ವಿಚಾರಗಳ ಕುರಿತು ದಿಕ್ಸೂಚಿ ಭಾಷಣ ಮಾಡುವರು. ರಂಗಂಪೇಟೆ, ತಿಮ್ಮಾಪುರ, ಹಸನಾಪುರ, ದಿವಳಗುಡ್ಡದ 35 ವಿವಿಧ ಸಮಾಜಗಳಿಂದ ಈ ಸಮಾವೇಶ ಆಯೋಜಿಸಲಾಗಿದೆ. ಹಿರಿಯರಾದ ಮಲ್ಲಿಕಾರ್ಜುನ ಕಡೆಚೂರ ಸಮಿತಿ ಅಧ್ಯಕ್ಷರಾಗಿದ್ದು ಮತ್ತು 35 ಜನರು ಉಪಾಧ್ಯಕ್ಷರಾಗಿರುತ್ತಾರೆ. ಪ್ರಮುಖ ಪ್ರಸನ್ನ ಹೆಡಿಗಿನಾಳ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಪಕ್ಷಾತೀತ, ಜಾತ್ಯಾತೀತ ಸಮಾವೇಶವಾಗಿದೆ. ರಾಷ್ಟಾಭಿಮಾನವುಳ್ಳ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ ಅವರು, ಬುದ್ದಿಜೀವಿಗಳು, ವಿಮರ್ಶಕರು, ಸಾಹಿತಿಗಳು, ಸಮಾಜ ಚಿಂತಕರು. ವಾಗ್ಮಿಗಳು ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸೇರಿ ಎರಡು ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಪ್ರಮುಖರಾದ ಮಲ್ಲಿಕಾರ್ಜುನ ಕಡೆಚೂರ, ಸೋಮಶೇಖರ ಶಾಬಾದಿ, ಸೂಗೂರೇಶ ವಾರದ, ಬಸವರಾಜ ಚಂದನಕೇರಿ, ಸಿದ್ರಾಮ ಎಲಿಗಾರ, ಪ್ರಸನ್ನ ಹೆಡಗಿನಾಳ, ಪ್ರಕಾಶ ಅಲಬನೂರ, ರಮೇಶ ಯಾದವ, ಶಿವ ಕುಮಾರ ಖಾದಿ, ರಾಚಪ್ಪ ಜೋತಾ, ಅನಿಲಗೌಡ ಬಿರಾದಾರ, ಮಾನಪ್ಪ ನಾಲವಾರ, ಮುರುಳಿ ನಾಯಕ, ವೆಂಕೋಬ ದರ್ಶನಕರ, ನಾಗೇಶ ಯರಸಂ, ಅಯ್ಯಪ್ಪ ಸುಂಗಿ, ಅಂಬಾಜಿ ಅಂಬೇಕರ್, ರಮೇಶ ಚವ್ಹಾಣ, ಕೃಷ್ಣ ಗುಡುಗುಂಟಿ, ಅಂಬ್ರೇಶ ಫರತಾಬಾದ, ಕಾಂತಪ್ಪ ಎಲಿಗಾರ, ಭೀಮಣ್ಣ ಭಜಂತ್ರಿ, ಹಣಮಂತ ದೊರೆ ಸೇರಿ ಇತರರಿದ್ದರು.






