ಪ್ರಥಮ ವಚನಕಾರ ಮುದನೂರ ದೇವರ ದಾಸಿಮಯ್ಯ ದೇವಸ್ಥಾನದ ಅಭಿವೃದ್ಧಿ ಹಾಗೂ ಪ್ರಾಧಿಕಾರ ರಚನೆಗೆ  ಆಗ್ರಹ


ಸುರಪುರ ಟೈಮ್ಸ್ ವಾರ್ತೆ

ಮುದನೂರು:ಪ್ರಥಮ ವಚನಕಾರರಾದ ಮುದನೂರ ದೇವರ ದಾಸಿಮಯ್ಯನವರ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕು ಹಾಗೂ ದೇವಸ್ಥಾನದ ನಿರ್ವಹಣೆ, ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ವಿಶೇಷ ಪ್ರಾಧಿಕಾರ ರಚನೆ ಮಾಡಬೇಕೆಂದು ಪ್ರಕಟಣೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಯಿತು.
ದಾಸಿಮಯ್ಯನವರು ವಚನ ಸಾಹಿತ್ಯದ ಆದ್ಯ ವಚನಕಾರರಾಗಿದ್ದು, ಅವರ ಚಿಂತನೆಗಳು ಸಮಾನತೆ, ಶರಣ ಸಂಸ್ಕೃತಿ ಮತ್ತು ಸಾಮಾಜಿಕ ನ್ಯಾಯವನ್ನು ಸಾರುತ್ತವೆ. ಇಂತಹ ಮಹಾನ್ ವಚನಕಾರರ ಸ್ಮರಣಾರ್ಥ ಇರುವ ಮುದನೂರ ದೇವರ ದಾಸಿಮಯ್ಯ ದೇವಸ್ಥಾನ ಇಂದು ಅಗತ್ಯ ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ದೇವಸ್ಥಾನದ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಯಿತು.
ದೇಶದ ವಿವಿಧ ಭಾಗಗಳಿಂದ ದಾಸಿಮಯ್ಯನವರ ಭಕ್ತರು ಮತ್ತು ವಚನಾಭಿಮಾನಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ರಸ್ತೆ, ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ, ವಿದ್ಯುತ್, ವಸತಿ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಲಾಯಿತು. ಜೊತೆಗೆ ದೇವಸ್ಥಾನವನ್ನು ವಚನ ಸಂಸ್ಕೃತಿ ಅಧ್ಯಯನ ಕೇಂದ್ರವಾಗಿ ರೂಪಿಸಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟರು.
ದೇವಸ್ಥಾನದ ಶಾಶ್ವತ ಅಭಿವೃದ್ಧಿ, ಸರಿಯಾದ ನಿರ್ವಹಣೆ ಹಾಗೂ ಭಕ್ತರಿಗೆ ಉತ್ತಮ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಸ್ವತಂತ್ರ ಪ್ರಾಧಿಕಾರ ರಚನೆ ಅತ್ಯಾವಶ್ಯಕವಾಗಿದ್ದು, ಸರ್ಕಾರ ಈ ಕುರಿತು ತ್ವರಿತ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.
ಸರ್ಕಾರ ವಚನ ಪರಂಪರೆಯ ಸಂರಕ್ಷಣೆಗೆ ಮುಂದಾಗಿ, ಪ್ರಥಮ ವಚನಕಾರರಾದ ದಾಸಿಮಯ್ಯನವರ ಹೆಸರಿಗೆ ಗೌರವ ಸಲ್ಲಿಸುವ ರೀತಿಯಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಸಂಘಟಕರು ಮತ್ತು ಭಕ್ತರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಸನಗೌಡ ಪಾಟೀಲ, ಚನ್ನಪ್ಪಗೌಡ ಬೇಕಿನಾಳ,ಮಡಿವಾಳಪ್ಪಗೌಡ ಬಳವಾಟ ರಮೇಶ ಸಾಹುಕಾರ ಕೋಳ್ಳಿ, ಶಾಂತರಡ್ಡಿ ಚೌಧರಿ. ವಿಶ್ವನಾಥರಡ್ಡಿ ಪಡೆಕನೂರ. ಕೃಷ್ಣರಡ್ಡಿ ಮುದನೂರ. ಮಹೇಶರಡ್ಡಿ ಪಡೆಕನೂರ. ಮೈಬೂಬ ಹಂದ್ರಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!