ಅಲ್ಪಸಂಖ್ಯಾತರ ಸಮುದಾಯದವರಿಗೆ ಸರಳ ವಿವಾಹಕ್ಕೆ ಪ್ರೋತ್ಸಾಹ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮ
ಸುರಪುರ ಟೈಮ್ಸ್ ವಾರ್ತೆ
ಸುರಪುರ;ತಾಲೂಕಿನ ಚಿಗರಿಹಾಳ, ಪೇಠ ಅಮ್ಮಾಪುರ, ಜಾಲಿಬೆಂಚಿ, ಕಕ್ಕೇರಾ ಸೇರಿದಂತೆ ವಿವಿದ ಗ್ರಾಮಗಳಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಯೋಜನೆಗಳ ಕುರಿತು ಅಲ್ಪಸಂಖ್ಯಾತರ ಸಮುದಾಯದವರಿಗೆ ಅಲ್ಪಸಂಖ್ಯಾತ ತಾಲೂಕು ವಿಸ್ತರಣಾಧಿಕಾರಿ ಗ್ಯಾನಪ್ಪ ಮೇಟಿ ಅವರ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಯಿತು. ಅಲ್ಪಸಂಖ್ಯಾತ ಸಮುದಾಯದ ಏಳಿಗೆಗಾಗಿ ಸರಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವಂತೆ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಉತ್ತೇಜನ ನೀಡುವುದರ ಜೊತೆಗೆ ಆರ್ಥಿಕ ಹೊರೆಯನ್ನು ತಗ್ಗಿಸಬೇಕೆಂಬ ಉದ್ದೇಶದಿಂದ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಯುವ ಸರಳ ವಿವಾಹಕ್ಕೆ ಪ್ರತಿ ಜೋಡಿಗೆ 50 ಸಾವಿರ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ವಧು ವರರು ಕರ್ನಾಟಕ ರಾಜ್ಯಕ್ಕೆ ಸೇರಿದ ಅಲ್ಪಸಂಖ್ಯಾತ ಸಮುದಾಯದವರಾಗಿರಬೇಕು, ಸಾಮೂಹಿಕ ವಿವಾಹಗಳಲ್ಲಿ ಕನಿಷ್ಠ 10 ಜೋಡಿಗಳು ಭಾಗವಹಿಸಿರತಕ್ಕದ್ದು, ಸೌಲಭ್ಯ ಪಡೆಯುವ ವಧುವಿಗೆ ಕನಿಷ್ಠ 18, ಗರಿಷ್ಠ 42 ವರ್ಷ ಹಾಗೂ ವರನಿಗೆ ಕನಿಷ್ಠ 21, ಗರಿಷ್ಠ 45 ವರ್ಷ ವಯಸ್ಸಿನವರಾಗಿರಬೇಕು,ವಧು-ವರರ ವಾರ್ಷಿಕ ಆದಾಯ ರೂ.2.50ಲಕ್ಷ ಮತ್ತು ಇಬ್ಬರ ಒಟ್ಟು ಆದಾಯ 5 ಲಕ್ಷ ಮೀರುವಂತಿಲ್ಲ ಎಂಬ ಷರತ್ತುಗಳನ್ನು ಒಳಗೊಂಡಿದೆ. ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಮುದಾಯದವರಿಗೆ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಮಹಮ್ಮದ್ ಗೌಸ್ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದವರು ಸೇರಿದಂತೆ ಇತರರು ಉಪಸ್ಥಿತರಿದ್ದರು.



