ಪ್ಲಾಸ್ಟಿಕ್ ವಿರುದ್ಧ ಕ್ರಮಕ್ಕೆ ನಗರಸಭೆಗೆ ಸಮಯವೇ ಇಲ್ಲವೇ? ಕಣ್ಣು ಮುಚ್ಚಿ ಕುಳಿತ ಆಡಳಿತ – ಜನಾರೋಗ್ಯಕ್ಕೆ ಅಪಾಯ…
– ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ
– kshbonhal@gmail.com
ಸುರಪುರ ಟೈಮ್ಸ್ ವಾರ್ತೆ
ಸುರಪುರ;ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಆದೇಶ ಜಾರಿಯಲ್ಲಿದ್ದರೂ, ವಾಸ್ತವದಲ್ಲಿ ಪ್ಲಾಸ್ಟಿಕ್ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಂಗಡಿ, ಹೋಟೆಲ್, ತರಕಾರಿ ಮಾರುಕಟ್ಟೆ, ಸಾರ್ವಜನಿಕ ಕಾರ್ಯಕ್ರಮಗಳು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಮುಕ್ತವಾಗಿ ಬಳಕೆಯಾಗುತ್ತಿದ್ದು, ಇದನ್ನು ತಡೆಯಬೇಕಾದ ನಗರಸಭೆ ಮಾತ್ರ ಕಣ್ಣು ಮುಚ್ಚಿ ಕುಳಿತಂತೆ ಕಾಣುತ್ತಿದೆ.
ಪರಿಸರ ಮಾಲಿನ್ಯ, ಒಳಚರಂಡಿ ತಡೆ, ಜಾನುವಾರುಗಳ ಸಾವಿಗೆ ಪ್ಲಾಸ್ಟಿಕ್ ಕಾರಣವಾಗುತ್ತಿದೆ ಎಂಬುದು ಗೊತ್ತಿದ್ದರೂ ನಗರಸಭೆಯ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ನಿಷೇಧ ಕೇವಲ ಆದೇಶ ಪತ್ರಕ್ಕೆ ಸೀಮಿತವಾಗಿದ್ದು, ಜಾರಿಯಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ನಗರಸಭೆಯ ಆರೋಗ್ಯ ಮತ್ತು ಪರಿಸರ ವಿಭಾಗಗಳು ಮೌನ ವಹಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ದಂಡ, ಜಪ್ತಿ, ತಪಾಸಣೆ ಎಂಬ ಪದಗಳು ಕಾಗದದಲ್ಲೇ ಉಳಿದಿದ್ದು, ನೆಲಮಟ್ಟದಲ್ಲಿ ಯಾವುದೇ ಕಠಿಣ ಕ್ರಮ ಕಾಣುತ್ತಿಲ್ಲ. “ಇದು ಆಡಳಿತದ ವೈಫಲ್ಯವಲ್ಲದೆ ಇನ್ನೇನು?” ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಪ್ಲಾಸ್ಟಿಕ್ ವಿರುದ್ಧ ಹೋರಾಟ ಮಾಡುವ ಜವಾಬ್ದಾರಿ ನಗರಸಭೆಯದ್ದೇ ಆಗಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರವು ಪ್ಲಾಸ್ಟಿಕ್ ಕಸದ ಗೂಡಾಗಿ ಮಾರ್ಪಡುವ ಆತಂಕ ಎದುರಾಗಿದೆ. ತಕ್ಷಣ ಕಠಿಣ ಕ್ರಮ, ನಿರಂತರ ದಾಳಿ ಮತ್ತು ಸಾರ್ವಜನಿಕ ಜಾಗೃತಿ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಇದರ ದುಷ್ಪರಿಣಾಮವನ್ನು ಜನರೇ ಅನುಭವಿಸಬೇಕಾಗುತ್ತದೆ ಎಂಬ ಎಚ್ಚರಿಕೆಗಳು ಕೇಳಿಬರುತ್ತಿವೆ.
ನಗರಸಭೆ ಇನ್ನಾದರೂ ಎಚ್ಚೆತ್ತುಕೊಂಡು ಪ್ಲಾಸ್ಟಿಕ್ ವಿರುದ್ಧ ನಿಜವಾದ ಕ್ರಮ ಕೈಗೊಳ್ಳುತ್ತದೆಯೇ? ಅಥವಾ ಇನ್ನುಮುಂದೂ ಕಣ್ಣು ಮುಚ್ಚಿ ಕುಳಿತ ಆಡಳಿತವಾಗಿಯೇ ಉಳಿಯುತ್ತದೆಯೇ ಎಂಬುದೇ ಜನರ ಮುಂದಿರುವ ದೊಡ್ಡ ಪ್ರಶ್ನೆಯಾಗಿದೆ.
ಜಿಲ್ಲಾಧಿಕಾರಿ ಆದೇಶದ ಮೇರೆಗೆ ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಈಗಾಗಲೇ ದಾಳಿ ನಡೆಸಲಾಗಿದೆ. ಪರಿಶೀಲನೆ ವೇಳೆ ನಿಯಮ ಉಲ್ಲಂಘಿಸಿದ ಅಂಗಡಿ–ವ್ಯಾಪಾರಿಗಳ ಮೇಲೆ ದಂಡ ವಿಧಿಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ದಾಳಿ ಇನ್ನಷ್ಟು ತೀವ್ರಗೊಳ್ಳಲಿದ್ದು, ಪ್ಲಾಸ್ಟಿಕ್ ಬಳಕೆ ಮುಂದುವರಿಸಿದರೆ ಯಾವುದೇ ರಿಯಾಯಿತಿ ಇಲ್ಲದೆ ಕಠಿಣ ಕಾನೂನು ಕ್ರಮ ಜರುಗಲಿದೆ.
-ಬಸವರಾಜ ಟನಕೇದಾರ
ಪೌರಾಯುಕ್ತರು, ನಗರಸಭೆ ಸುರಪುರ.





