ಸುರಪುರದಲ್ಲಿ ರಾಷ್ಟ್ರೀಯ ಮತದಾರರ ದಿನ |  ಯುವ ಜನತೆ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ; ಜಿಲ್ಲಾ ಸತ್ರ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅಭಿಮತ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಯುವ ಜನತೆ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಎಲ್ಲ ಚುನಾವಣೆಗಳಲ್ಲಿ ಅರ್ಹ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಹೇಳಿದರು.
ಇಲ್ಲಿಯ ತಹಸಿಲ್ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘ ಮತ್ತು ತಾಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮತದಾನ ಅತ್ಯಮೂಲ್ಯ ಹಕ್ಕು ಅದನ್ನು ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಮತ ಚಲಾಯಿಸಬೇಕು. ಅದು ಪ್ರತಿಯೊಬ್ಬರ ಕರ್ತವ್ಯವು ಕೂಡ ಎಂದರು.
18 ವರ್ಷ ಪೂರೈಸಿದ ಪ್ರತಿಯೊಬ್ಬರಿಗೂ ಮತದಾನದ ಅವಕಾಶವನ್ನು ನಮ್ಮ ಸಂವಿಧಾನ ನೀಡಿದ್ದು, ಮತದಾರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ, ವಿವೇಚನೆಯಿಂದ ಮತ್ತು ನಿರ್ಭೀತಿಯಿಂದ ಮತ ಚಲಾಯಿಸಬೇಕು. ರಾಷ್ಟದ ಅಭಿವೃದ್ಧಿ, ಏಳಿಗೆಯ ಕಡೆಗೆ ನಾಗರಿಕರ ಜವಾಬ್ದಾರಿ, ಕರ್ತವ್ಯವನ್ನು ನೆನಪಿಸುವ ಉದ್ದೇಶದಿಂದ ಪ್ರತಿ ವರ್ಷ ಜ.25  ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಚುನಾವಣೆಯಲ್ಲಿ ಪ್ರತಿಯೊಂದು ಮತಕ್ಕೂ ಮೌಲ್ಯವಿದ್ದು ತಪ್ಪದೇ ಮತದಾನದಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಹೆಚ್.ಎ.ಸರಕಾವಸ್ ಮಾತನಾಡಿ, ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವಾದ ಜ.25 ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲಾಗುತ್ತಿದೆ. 18 ವರ್ಷದ ಎಲ್ಲರಿಗೂ ಮತದಾನದ ಹಕ್ಕಿದೆ. ಮತದಾರರು ಚುನಾವಣೆ ಸಂದರ್ಭದಲ್ಲಿ ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾವಣೆಮಾಡುವ ಮೂಲಕ ಯೋಗ್ಯರನ್ನು ಆಯ್ಕೆಮಾಡಬೇಕು ಎಂದರು. ನ್ಯಾಯವಾದಿ ನಂದಕುಮಾರ ಕನ್ನೆಳ್ಳಿ, ಶಿರಸ್ತೇದಾರ್ ವಿನಾಯಕ ವೇದಿಕೆಯಲ್ಲಿದ್ದರು.ಶಿರಸ್ತೇದಾರ್ ಸುಶೀಲಾ ಬಾಯಿ, ಚುನಾವಣಾ ವಿಭಾಗದ ಶಿವುಕುಮಾರ ಸೇರಿ ಅನೇಕರಿದ್ದರು. ಎಂ.ಬಿ.ಹುಲಿಕೇರಿ ನಿರೂಪಿಸಿ ವಂದಿಸಿದರು.

ಇಂದಿಗೂ ದೇಶದ ಎಲ್ಲ ಚುನಾವಣೆಗಳಲ್ಲಿ ಪ್ರಸ್ತುತ ಶೇ.65-70 ರಷ್ಟು ಮಾತ್ರ ಮತ ಚಲಾವಣೆ ಆಗುತ್ತಿದೆ. ದೇಶದಲ್ಲಿ ಶೇ.100 ಕ್ಕೆ ನೂರರಷ್ಟು ಮತ ಚಲಾವಣೆ ಆಗಬೇಕು. ಇದಕ್ಕೆ ಯುವ ಜನತೆಯ ಇಚ್ಚಾಶಕ್ತಿಯ ಅವಶ್ಯಕವಿದೆ. ಯುವಕರು ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಮತದಾನದ ಮಹತ್ವ ತಿಳಿಸಿ ಪ್ರತಿಯೊಬ್ಬರು ಮತದಾನ ಚಲಾಯಿಸುವಂತೆ ಪ್ರೇರೇಪಿಸಬೇಕು.
ಯಮನಪ್ಪ ಬಮ್ಮಣಗಿ, ನ್ಯಾಯಾಧೀಶರು, ಸುರಪುರ.

ನನ್ನ ಭಾರತ-ನನ್ನ ಮತ
ನನ್ನ ಭಾರತ-ನನ್ನ ಮತ ೨೦೨೬ ರ ಧ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು. ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಯುವ ಮತದಾರರಿಗೆ ಸಾಂಕೇತಿಕವಾಗಿ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಬೂತ್ ಮಟ್ಟದಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಬಿಎಲ್‌ಒ ಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಮತದಾರರ ದಿನಾಚರಣೆ ನಿಮಿತ್ತ ವಿವಿಧ ಶಾಲಾ-ಕಾಲೇಜುಗಳಲ್ಲಿ ಹಮ್ಮಿಕೊಂಡಿದ್ದ ಪ್ರಬಂಧ-ರಸಪ್ರಶ್ನೇ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ, ಬಹುಮಾನ ನೀಡಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!