KPCTL ನೌಕರರ ವಿಭಾಗ ಮಟ್ಟದ ಕ್ರೀಡಾಕೂಟ |ಆರೋಗ್ಯವಂತ ಜೀವನಕ್ಕೆ ಕ್ರೀಡೆ ಬಹುಮುಖ್ಯ;ಇಇ ರಾಜಶೇಖರ ಬಿಳ್ವಾರ

ಸುರಪುರ ಟೈಮ್ಸ್ ವಾರ್ತೆ
ಸುರಪುರ : ಕ್ರೀಡೆ ನಮ್ಮನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ ಹಾಗೂ ಆರೋಗ್ಯವಂತ ಜೀವನಕ್ಕೆ ಕ್ರೀಡೆ ಬಹು ಮುಖ್ಯವಾಗಿದೆ ಎಂದು ಜೆಸ್ಕಾಂ ಇಲಾಖೆ ಇಇ ರಾಜಶೇಖರ ಬಿಳ್ವಾರ ಹೇಳಿದರು.
ಇಲ್ಲಿಯ ಸರಕಾರಿ ಕ್ರೀಡಾಂಗಣದಲ್ಲಿ ಸುರಪುರ ವಿಭಾಗ ವ್ಯಾಪ್ತಿಯ ಸುರಪುರ, ಶಹಾಪುರ ಮತ್ತು ಹುಣಸಗಿ ತಾಲೂಕುಗಳ ಕೆಪಿಟಿಸಿಎಲ್ ನೌಕರರ ಕ್ರೀಡಾಕೂಟಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿನಿತ್ಯದ ಕೆಲಸ ನಡುವೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಓಟ, ನಡಿಗೆ, ಕ್ರೀಡೆ ಈ ರೀತಿಯ ಚಟುವಟಿಕೆಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿರಲು ಸಾಧ್ಯವಾಗಲಿದೆ ಎಂದರು.
ನೌಕರರು ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ. ಒತ್ತಡದ ನಡುವೆ ಆರೋಗ್ಯಕ್ಕೆ ಸಮಯ ನೀಡಿದ್ದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗಲಿದೆ. ಮಾನಸಿಕ ಮತ್ತು ದೈಹಿಕವಾಗಿ ಪರಿಪೂರ್ಣರಾಗಿದ್ದಲ್ಲಿ ಎಷ್ಟೇ ಒತ್ತಡವಿದ್ದರೂ ಕೆಲಸ ನಿಭಾಯಿಸಬಹುದು. ಆ ನಿಟ್ಟಿನಲ್ಲಿ ಆರೋಗ್ಯವೇ ಭಾಗ್ಯ ಎನ್ನುವಂತೆ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವಾಗಿರುವುದರಿಂದ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಕೆಪಿಟಿಸಿಎಲ್ ನೌಕರರ ಕ್ರೀಡಾಕೂಟ ಹಮ್ಮಿಕೊಂಡಿರುವುದು ಸಂತೋಷದ ಸಂಗತಿ ಎಂದರು. ಎಇಇ ಗಳಾದ ಮರೆಪ್ಪ ಕಡೆಕರ್, ಭೀಮಾಶಂಕರ, ಕಳಕಪ್ಪ, ಮಹ್ಮದ್ ರಫೀಕ್, ಎಇ ಗಳಾದ ಶಾಂತಪ್ಪ ಕುರಿ, ಸುನೀಲ್, ಬಸವರಾಜ್, ಜೆಇ ಶ್ರೀಶೈಲ ತಮದಡ್ಡಿ, ಅಕೌಂಟ್ ಆಫೀಸರ್ ಬಸವರಾಜ್ ಮತ್ತು ವೆಂಕಟಪತಿ ರಾಜು, ನೌಕರರ ಸಂಘದ ಅಧ್ಯಕ್ಷ ಮರೆಪ್ಪ ತೇಲ್ಕರ್, ಉಪಾಧ್ಯಕ್ಷ ಬುರಾನುದ್ದೀನ್, ಕಾರ್ಯದರ್ಶಿ ಮೈಲಾರಲಿಂಗ, ಸಹ ಕಾರ್ಯದರ್ಶಿ ಶರಣಪ್ಪ, ಖಜಾಂಜಿ ವೆಂಕಟೇಶ ಕಾಗಿ, ಹಿರಿಯ ಸಹಾಯಕರು ಮಂಜುನಾಥ, ಸದಸ್ಯರಾದ ನೀಲಕಂಠ, ಅಮ್ಜದ್ ಅಲಿ, ಉಮೇಶ ಹುಬ್ಬಳ್ಳಿ ಮಠ, ಏಕಾನಾಥ ಪುಲ್ಸೆ ಸೇರಿ ಅನೇಕರಿದ್ದರು.

ಶಹಾಪುರ ತಂಡಕ್ಕೆ ಗೆಲುವು
ಸುರಪುರ ವಿಭಾಗ ವ್ಯಾಪ್ತಿಯ ಕೆಪಿಟಿಸಿಎಲ್ ನೌಕರರ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಒಟ್ಟು ಆರು ತಂಡಗಳು ಭಾಗವಹಿಸಿದ್ದವು. ಸುರಪುರ ಮತ್ತು ಶಹಾಪುರ ತಾಲೂಕುಗಳ ಮಧ್ಯೆ ಫೈನಲ್ ಪಂದ್ಯ ಜರುಗಿತು. ಶಹಾಪುರ ತಂಡ ಸುರಪುರ ತಂಡವನ್ನು ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಇತರೆ ಕ್ರೀಡೆಗಳ ಜತೆಯಲ್ಲಿ ಮಹಿಳಾ ನೌಕರರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ದೈನಂದಿನ ಕೆಲಸದ ಒತ್ತಡ ಮರೆತ ಕೆಪಿಟಿಸಿಎಲ್ ನೌಕರರು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂತಸಪಟ್ಟರು.

Leave a Reply

Your email address will not be published. Required fields are marked *

error: Content is protected !!