ಪ್ಲಾಸ್ಟಿಕ್ ವಿರುದ್ಧ ಕ್ರಮಕ್ಕೆ ನಗರಸಭೆಗೆ ಸಮಯವೇ ಇಲ್ಲವೇ?ಕಣ್ಣು ಮುಚ್ಚಿ ಕುಳಿತ ಆಡಳಿತ – ಜನಾರೋಗ್ಯಕ್ಕೆ ಅಪಾಯ, ಸುರಪುರ ಟೈಮ್ಸ್ ವರದಿ ಪರಿಣಾಮ: ಎಚ್ಚೆತ್ತುಕೊಂಡ ನಗರಸಭೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ; ಸುರಪುರ ಟೈಮ್ಸ್‌ನಲ್ಲಿ ಪ್ರಕಟವಾದ “ಪ್ಲಾಸ್ಟಿಕ್ ವಿರುದ್ಧ ಕ್ರಮಕ್ಕೆ ನಗರಸಭೆಗೆ ಸಮಯವೇ ಇಲ್ಲವೇ? ಕಣ್ಣು ಮುಚ್ಚಿ ಕುಳಿತ ಆಡಳಿತ – ಜನಾರೋಗ್ಯಕ್ಕೆ ಅಪಾಯ” ಎಂಬ ತೀವ್ರ ಟೀಕೆ ಹೊಂದಿದ ವರದಿ ನಗರಸಭೆಯ ಗಮನ ಸೆಳೆದಿದ್ದು, ಇದಾದ ಬಳಿಕ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ನಗರದ ರಂಗಂಪೇಟೆ ಸುರಪುರ ವಿವಿಧ ಕಡೆಗಳಲ್ಲಿ ನಗರಸಭೆಯ ಅಧಿಕಾರಿಗಳು ದಾಳಿ ನಡೆಸಿ ಅಂಗಡಿಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ಲಾಸ್ಟಿಕ್ ವಶಪಡಿಸಿಕೊಂಡು ನೋಟಿಸ್ ನೀಡಿರುವ ಘಟನೆ ನಡೆದಿದೆ.
ಪ್ಲಾಸ್ಟಿಕ್ ಬಳಕೆ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ನಗರದ ವಿವಿಧ ಭಾಗಗಳಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯ ಬಗ್ಗೆ ದೂರುಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ, ಸುರಪುರ ಟೈಮ್ಸ್ ವರದಿ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ನಗರಸಭೆಯ ಆರೋಗ್ಯ ಹಾಗೂ ಪರಿಸರ ವಿಭಾಗದ ಅಧಿಕಾರಿಗಳು ಸಭೆ ನಡೆಸಿ, ಪ್ಲಾಸ್ಟಿಕ್ ಬಳಕೆ ತಡೆಗೆ ಕಠಿಣ ಕ್ರಮ ಕೈಗೊಳ್ಳಲು ತೀರ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರ ಮಾತನಾಡಿ, ಪ್ಲಾಸ್ಟಿಕ್ ಇಡೀ ಪರಿಸರವನ್ನು ಹಾಳು ಮಾಡಲಿದ್ದು ಯಾರೂ ಕೂಡ ಪ್ಲಾಸ್ಟಿಕನ್ನು ಬಳಕೆ ಮಾಡದೆ ಬಟ್ಟೆ ಚೀಲಗಳನ್ನು ಬಳಕೆ ಮಾಡುವಂತೆ ತಿಳಿಸಿದರು.ಈಗಾಗಲೇ ಸರ್ಕಾರವೇ ಪ್ಲಾಸ್ಟಿಕ್ ಬ್ಯಾನ್ ಮಾಡಿ ನಿರಂತರವಾಗಿ ಜಾಗೃತಿಯ ಮೂಡಿಸಲಾಗುತ್ತಿದೆ ಆದರೂ ಕೂಡ ಅಕ್ರಮವಾಗಿ ಪ್ಲಾಸ್ಟಿಕ್ ಗಳನ್ನು ಸಂಗ್ರಹಿಸಿ ಇಟ್ಟುಕೊಂಡು ತಮ್ಮ ವ್ಯಾಪಾರಕ್ಕೆ ಬಳಕೆ ಮಾಡುತ್ತಿರುವುದು ತುಂಬಾ ಬೇಸರದ ಸಂಗತಿಯಾಗಿದೆ ಎಂದು ವ್ಯಾಪಾರಸ್ಥರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ಪ್ಲಾಸ್ಟಿಕ್ ಮಣ್ಣಿನಲ್ಲಿ ಸೇರಿಕೊಂಡರೆ ಎಷ್ಟು ವರ್ಷಗಳಾದರೂ ಕೊಳೆಯದೆ ಹಾಗೆ ಉಳಿದುಕೊಂಡು ಮಣ್ಣನ್ನು ಕೂಡ ಹಾಳುಮಾಡುತ್ತದೆ ಅಲ್ಲದೆ ಪ್ಲಾಸ್ಟಿಕ್ ನಲ್ಲಿ ಬಿಸಿಯ ಪದಾರ್ಥಗಳನ್ನು ಹಾಕುವುದರಿಂದ ಅಂತಹ ಪದಾರ್ಥ ಸೇವನೆಯಿಂದ ಕ್ಯಾನ್ಸರ್ ಕೂಡ ಬರುತ್ತದೆ. ಆದ್ದರಿಂದ ಸಾರ್ವಜನಿಕರು ಪ್ಲಾಸ್ಟಿಕ್ ಬಗ್ಗೆ ತುಂಬಾ ಜಾಗೃತಿ ವಹಿಸಬೇಕಾಗಿದೆ ಎಂದರು.
ನಾವು ಕೂಡ ನಿರಂತರವಾಗಿ ಜಾಗೃತಿ ಮೂಡಿಸುತ್ತಿದ್ದರು ವ್ಯಾಪಾರಸ್ಥರು ಅನಧಿಕೃತವಾಗಿ ಪ್ಲಾಸ್ಟಿಕ್ ಇಟ್ಟುಕೊಂಡು ಗ್ರಾಹಕರಿಗೆ ನೀಡುವುದು ಕಾನೂನು ಬಾಹಿರವಾಗಲಿದೆ.ನಗರದಲ್ಲಿ ಪ್ಲಾಸ್ಟಿಕ್ ಬಳಕೆಯ ಮೇಲ್ವಿಚಾರಣೆ ಹೆಚ್ಚಿಸಲಾಗುವುದು, ನಿಯಮ ಉಲ್ಲಂಘಿಸುವ ಅಂಗಡಿಗಳು ಮತ್ತು ವ್ಯಾಪಾರಿಗಳ ಮೇಲೆ ದಂಡ ಹಾಗೂ ಜಪ್ತಿ ಕ್ರಮ ಜರುಗಿಸಲಾಗುವುದು ಎಂದರು.ಜೊತೆಗೆ ಸಾರ್ವಜನಿಕ ಜಾಗೃತಿ ಅಭಿಯಾನ ನಡೆಸುವ ಮೂಲಕ ಪ್ಲಾಸ್ಟಿಕ್ ಮುಕ್ತ ನಗರ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂಬ ಭರವಸೆ ಕೂಡ ನೀಡಲಾಗಿದೆ.
ಸುರಪುರ ಟೈಮ್ಸ್ ವರದಿ ಬಳಿಕ ನಗರಸಭೆ ಎಚ್ಚೆತ್ತುಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದೆ
ಪಟ್ಟಣದ ರಂಗಂಪೇಟೆಯ ಅನೇಕ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಂಡು ನಂತರ ಸುರಪುರ ನಗರದ ಮಹಾತ್ಮ ಗಾಂಧಿ ವೃತ್ತ, ದರ್ಬಾರ್ ರಸ್ತೆಯ ಅಂಗಡಿಗಳಲ್ಲಿ ಪ್ಲಾಸ್ಟಿಕ್ ವಶಪಡಿಸಿಕೊಂಡು ನೋಟಿಸ್ ನೀಡಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ, ಸಿಬ್ಬಂದಿಗಳಾದ ಗುರುಸ್ವಾಮಿ, ಮೈನುದ್ದೀನ್, ದುರ್ಗಪ್ಪ, ಹಣಮಂತರಾಯ ಸೇರಿದಂತೆ ಕಾರ್ಮಿಕರು ಕೂಡ ಭಾಗವಹಿಸಿದ್ದರು.




.
