ತಿಂಥಣಿ “ಮೌನೇಶ್ವರ ರಥೋತ್ಸವ” ಇಂದು ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ…

– ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ

– kshbonhal@gmail.com

ಸುರಪುರ ಟೈಮ್ಸ್ ವಾರ್ತೆ

ಸುರಪುರ: ನಂಬಿಕೆಯ ನಾದ, ಶ್ರದ್ಧೆಯ ಸ್ಪಂದನೆ ಮತ್ತು ಭಕ್ತಿಭಾವದ ಜೀವಂತ ಸಾಕ್ಷಿಯಾಗಿ ತಿಂಥಣಿಯ ಜಗದ್ಗುರು ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವ ಇಂದು ರಥೋತ್ಸವದೊಂದಿಗೆ ಭಕ್ತಿ–ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದೆ. ಸಂಜೆ 5 ಗಂಟೆಗೆ ಜರುಗಲಿರುವ ರಥೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದು, ಮೌನೇಶ್ವರ ಕ್ಷೇತ್ರ ಆಧ್ಯಾತ್ಮಿಕ ಪ್ರಕಾಶದಲ್ಲಿ ಮಿಂಚುತ್ತಿದೆ.
ರಥೋತ್ಸವದ ವೇಳೆ ದೇವಸ್ಥಾನದ ಅರ್ಚಕರು, ಸುರಪುರ ಅರಸು ಸಂಸ್ಥಾನದ ರಾಜರು, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಜಿಲ್ಲೆ–ತಾಲ್ಲೂಕುಗಳಿಂದ ಸಹಸ್ರಾರು ಭಕ್ತರು ಪಾದಯಾತ್ರೆ ಮತ್ತು ವಾಹನಗಳ ಮೂಲಕ ತಿಂಥಣಿಗೆ ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ದೇವಸ್ಥಾನದ ಆವರಣದಲ್ಲಿ ಟೆಂಟ್‌ಗಳನ್ನು ಹಾಕಿ ದಾಸೋಹ ವ್ಯವಸ್ಥೆ ನಡೆಸುತ್ತಿದ್ದಾರೆ.
ಭಕ್ತರ ಭದ್ರತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನೀರಿನ ಘಟಕಗಳು ಹಾಗೂ ಸಂಚಾರ ಮಾರ್ಗಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ತಿಂಥಣಿ ಗ್ರಾಮಕ್ಕೆ ನಿರಂತರ ಜ್ಯೋತಿ ಸೌಲಭ್ಯ ಇರುವುದರಿಂದ ವಿದ್ಯುತ್ ವ್ಯತ್ಯಯವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸುರಪುರದ ಜೆಸ್ಕಾಂ ಇಇ ರಾಜಶೇಖರ ತಿಳಿಸಿದ್ದಾರೆ.
ಜಾತ್ರೆ ಸಂದರ್ಭದಲ್ಲಿ ಭದ್ರತೆಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ’ ಎಂದು ಸುರಪುರ ಡಿವೈಎಸ್‌ಪಿ ಜಾವೀದ್ ಇನಾಂದಾರ್ ತಿಳಿಸಿದ್ದಾರೆ.
ಟ್ರಾಫಿಕ್ ಸಮಸ್ಯೆ ಉಂಟಾಗದಂತೆ ಸರ್ಕಾರಿ ಪ್ರೌಢಶಾಲಾ ಆವರಣ ಹಾಗೂ ಸುರಪುರ ಮಾರ್ಗದಿಂದ ಬರುವ ವಾಹನಗಳಿಗೆ ಜಹಾಗೀರದಾರ ಜಮೀನಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಭಕ್ತರಿಗೆ ಶುದ್ಧ ಕುಡಿಯುವ ನೀರು, ತುರ್ತು ವೈದ್ಯಕೀಯ ಸೇವೆ, ವಿದ್ಯುತ್ ಬೆಳಕು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಉಪ ತಹಶೀಲ್ದಾರ್ ರೇವಪ್ಪ ತೆಗ್ಗಿಮನಿ ಮಾಹಿತಿ ನೀಡಿದ್ದಾರೆ.
ವಿಶೇಷತೆ:
ಗುಹೆಯಿಂದ ಮೌನೇಶ್ವರರ ಮೂರ್ತಿಯನ್ನು ಹೊರತೆಗೆದು ಐದು ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ನಾಳೆ ಧೂಳಗಾಯಿ:
ಸೋಮವಾರ ಧೂಳಗಾಯಿ ಹಾಗೂ ಗುಹಾ ಪ್ರವೇಶ ಇರುವುದರಿಂದ ಜಾತ್ರೆಗೆ ಇನ್ನಷ್ಟು ಭಕ್ತರು ಆಗಮಿಸುವ ನಿರೀಕ್ಷೆ ಇದೆ.

Leave a Reply

Your email address will not be published. Required fields are marked *

error: Content is protected !!