ಕುಷ್ಠ ರೋಗದ ಲಕ್ಷಣ ಕಂಡುಬಂದರೆ ವೈದ್ಯರಿಗೆ ತಿಳಿಸಿ;THO ಡಾ.ಆರ್‌ವಿಎನ್
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಕುಷ್ಠ ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಂದ ಸಲಹೆ, ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ತಿಳಿಸಿದರು.
ಇಲ್ಲಿಯ ತಾಲೂಕು ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸ್ಪರ್ಶ ಕುಷ್ಠ ಅರಿವು ಕಾರ್ಯಕ್ರಮದ ನಿಮಿತ್ತವಾಗಿ ಪ್ರತಿಜ್ಞೆ ಬೋಧಿಸಿ ಮಾತನಾಡಿದ ಅವರು, ಕುಷ್ಠ ರೋಗವು ಮಾನವ ಕುಲಕ್ಕೆ ತಿಳಿದಿರುವ ಅತ್ಯಂತ ಹಳೆಯ ಕಾಯಿಲೆಯಾಗಿದೆ. ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ ಎಂದು ಹೇಳಿದರು.
ಚರ್ಮದ ಮೇಲೆ ಗಂಟುಗಳು, ಕಣ್ಣಿನ ರಪ್ಪೆಗಳು ಮುಚ್ಚುವಲ್ಲಿ ತೊಂದರೆ, ಕೈ-ಕಾಲುಗಳಲ್ಲಿ ಬಹುದಿನದ ಗಾಯ, ಕೈ-ಕಾಲುಗಳಲ್ಲಿ ಬೆರಳು ಮಡಚಿ ಕೊಂಡಿರುವುದು, ನಡೆಯುವಾಗ ಕಾಲು ಎಳೆಯುವುದು, ಕಾ-ಕಾಲು ಜುಮ್ಮು ಎನಿಸುವಿಕೆ, ಅಂಗೈ ಅಥವಾ ಬಲಹೀನತೆ ಇವುಗಳೆಲ್ಲವೂ ಕುಷ್ಠ ರೋಗದ ಲಕ್ಷಣಗಳಾಗಿವೆ. ಕುಷ್ಠ ರೋಗವನ್ನು ಗುಣಪಡಿಸಬಹುದಾಗಿದೆ ಮತ್ತು ಆರಂಭಿಕ ಹಂತಗಳ ಚಿಕಿತ್ಸೆಯು ವಿಕಲಾಂಗತೆಯನ್ನು ತಡೆಯಬಹುದು ಎಂದರು.
ಪ್ರತಿ ವರ್ಷ ಜನವರಿ 30 ರಂದು ಕುಷ್ಠ ರೋಗ ನಿರ್ಮೂಲನಾ ದಿನವನ್ನು ವಿಶಿಷ್ಟ ಧ್ಯೆಯದೊಂದಿಗೆ ಆಚರಿಲಾಗುತ್ತದೆ. ಕುಷ್ಠ ರೋಗವು ಗುಣಪಡಿಸಬಹುದಾದ ಕಾಯಿಲೆ, ನಿಜವಾದ ಸವಾಲು, ಕಳಂಕ 2026 ರ ಕುಷ್ಠ ರೋಗ ದಿನಾಚರಣೆಯ ಘೋಷ ವಾಕ್ಯವಾಗಿದೆ. ಕುಷ್ಠ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಮತ್ತು ಆರಂಭಿಕ ಹಂತದಲ್ಲೇ ಚಿಕಿತ್ಸೆ ಪಡೆಯಲು ಪ್ರೇರೇಪಿಸುವುದು. ಕಾಯಿಲೆಯ ಕುರಿತಾದ ಭಯ ಮತ್ತು ತಾರತಮ್ಯವನ್ನು ತೊಡೆದುಹಾಕುವುದು. ಕುಷ್ಠರೋಗ ಬಾಧಿತರು ಸಮಾಜದಲ್ಲಿ ಗೌರವದಿಂದ ಬದುಕಲು ಸಹಕರಿಸುವುದು ಪ್ರಮುಖ ಉದ್ಧೇಶವಾಗಿದೆ ಎಂದರು. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.



