ನಾಳೆ ದಕ್ಷಿಣ ಕಾಶಿ ತಿಂಥಣಿ ಕ್ಷೇತ್ರಕ್ಕೆ ಕೆ.ಪಿ. ನಂಜುಂಡಿ ಆಗಮನ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಸಗರನಾಡಿನ ಐತಿಹಾಸಿಕ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಪವಿತ್ರ ಸುಕ್ಷೇತ್ರ ತಿಂಥಣಿ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವಕ್ಕೆ ನಾಳೆ ವಿಶೇಷ ಭಕ್ತಿಭಾವದ ಕಿರಣ ಹೊಳೆಯಲಿದೆ.
ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷರಾದ ಕೆ.ಪಿ. ನಂಜುಂಡಿ ಅವರು ನಾಳೆ ಬೆಳಿಗ್ಗೆ 11 ಗಂಟೆಗೆ ತಿಂಥಣಿ ಕ್ಷೇತ್ರಕ್ಕೆ ಆಗಮಿಸಿ, ಜಗದ್ಗುರು ಶ್ರೀ ಮೌನೇಶ್ವರರ ಪಾವನ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಲಿದ್ದಾರೆ. ಜಾತ್ರಾ ಮಹೋತ್ಸವದ ವೈಭವವನ್ನು ವೀಕ್ಷಿಸಿ, ವಿಶ್ವಕರ್ಮ ಸಮುದಾಯದ ಮುಖಂಡರೊಂದಿಗೆ ಆತ್ಮೀಯ ಸಂವಾದ ನಡೆಸಲಿದ್ದಾರೆ.
ಪಾವನ ಧರ್ಮಕ್ಷೇತ್ರ ತಿಂಥಣಿಯಲ್ಲಿ ಭಕ್ತರ ಹರಕೆ, ನಂಬಿಕೆ ಮತ್ತು ಸಂಸ್ಕೃತಿಯ ಸಂಗಮದ ಮಧ್ಯೆ ನಡೆಯುತ್ತಿರುವ ಜಾತ್ರಾ ಮಹೋತ್ಸವಕ್ಕೆ ಕೆ.ಪಿ. ನಂಜುಂಡಿ ಅವರ ಆಗಮನ ಮತ್ತಷ್ಟು ಭಕ್ತಿಭಾವವನ್ನು ತುಂಬಲಿದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಸುರಪುರ ತಾಲೂಕು ಘಟಕದ ಅಧ್ಯಕ್ಷರಾದ ದೇವೇಂದ್ರಪ್ಪ ಎಂ. ವಿಶ್ವಕರ್ಮ ಹಾಗೂ ತಾಲೂಕು ಗೌರವಾಧ್ಯಕ್ಷರಾದ ಮಲ್ಲಿಕಾರ್ಜುನ ವಿಶ್ವಕರ್ಮ (ದಿವಳಗುಡ್ಡ) ತಿಳಿಸಿದ್ದಾರೆ.

