ಸುರಪುರ ರಂಗಂಪೇಟೆ ಕ್ಲಸ್ಟರ್‌ನಲ್ಲಿ FLN ಕಲಿಕಾ ಹಬ್ಬಕ್ಕೆ ಚಾಲನೆ, ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುವ ಸೃಜನಾತ್ಮಕ ಚಟುವಟಿಕೆಗಳಿಗೆ ಕಲಿಕಾ ಹಬ್ಬ; BEO ಯಲ್ಲಪ್ಪ ಕಾಡ್ಲೂರು
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಪ್ರಾಥಮಿಕ ಹಂತದಲ್ಲಿ ಒಂದರಿಂದ ಐದನೇ ತರಗತಿಯ ಮಕ್ಕಳನ್ನು ವಿವಿಧ ಕಲಿಕಾ ಆಟಗಳು ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಾಗ ತರಗತಿ ಪ್ರಕ್ರಿಯೆಯಲ್ಲಿ ನಿರೀಕ್ಷಿತ ಕಲಿಕಾ ಫಲಶ್ರುತಿಯನ್ನು ಪಡೆಯಲು ಸಾಧ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ಹೇಳಿದರು.
ಸಮೀಪದ ತಿಮ್ಮಾಪುರದ ಜಿಎಂಪಿಎಸ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಂಗಂಪೇಟೆ ಕ್ಲಸ್ಟರ್‌ನ ಎಫ್‌ಎಲ್‌ಎನ್ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕಾ ಹಬ್ಬವು ಸಂತೋಷದಾಯಕ ಹಾಗೂ ಅನುಭವಯುಕ್ತ ಕಲಿಕೆಯ ವಾತಾವರಣ ಪ್ರೇರೇಪಿಸುತ್ತದೆ. ಮಕ್ಕಳ ಕಲಿಕೆಯ ಒತ್ತಡ ಕಡಿಮೆಗೊಳಿಸಲು ಸೃಜನಾತ್ಮಕ ಚಟುವಟಿಕೆ ಮತ್ತು ಮೋಜಿನೊಂದಿಗೆ ಕಲಿಕೆಗೆ ಸಹಕಾರಿಯಾಗುತ್ತದೆ ಎಂದರು.
ಮಕ್ಕಳು ಶಿಕ್ಷಕರ ಜೊತೆಯಾಗಿ ಪೋಷಕರನ್ನು ಹಾಗೂ ಸಮುದಾಯ ಸದಸ್ಯರನ್ನು ಪರಸ್ಪರ ಭೇಟಿಯಾಗಲು ಒಂದು ಉತ್ತಮ ವೇದಿಕೆಯಾಗಿ ಕಲಿಕಾ ಹಬ್ಬ ನೆರವಾಗುತ್ತದೆ. ಗಟ್ಟಿ ಓದು, ಕತೆ ಹೇಳುವುದು, ಕೈಬರಹ, ಸುಲಭ ಗಣಿತ, ರಸಪ್ರಶ್ನೇ ಸೇರಿದಂತೆ ಆರೋಗ್ಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಕೌಶಲಗಳನ್ನು ಮಕ್ಕಳಿಗೆ ಕಲಿಸಲಾಗುತ್ತದೆ ಎಂದು ತಿಳಿಸಿದರು.
ರಂಗಂಪೇಟೆ ಕೆಪಿಎಸ್ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಾಸೀರ್ ಹುಸೇನ್ ಕುಂಡಾಲೆ, ಸದಸ್ಯರಾದ ರಮೇಶ ಡೊಳ್ಳೆ, ಸುರೇಶ ಗೂಳೆದ್, ಪ್ರಾಚಾರ್ಯ ಭೀಮಣ್ಣ ಭೋಸಗಿ, ಉಪ ಪ್ರಾಂಶುಪಾಲ ಸಿದ್ದಣ್ಣ ಹೊಸಗೌಡರು, ಶಿಕ್ಷಣ ಸಂಯೋಜಕ ಶರಣಬಸವ ಗಚ್ಚಿನಮನಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣ ಕಲಬುರಗಿ, ಬಿಆರ್‌ಪಿ ಖಾದರ್ ಪಟೇಲ್, ವೇದಿಕೆಯಲ್ಲಿದ್ದರು.
ಸಿಆರ್‌ಪಿಗಳಾದ ಲಕ್ಷ್ಮಣ ದೇವರಗೋನಾಲ, ಶಿವಕುಮಾರ ಹಿರೇಮಠ, ಶಿವಕುಮಾರ ಕಮತಗಿ, ರಾಮಣ್ಣ ಗುಂಜಾಲ್, ಚನ್ನಪ್ಪ ಕ್ಯಾದಗಿ, ಮುಖ್ಯ ಗುರುಗಳಾದ ಪರಶುರಾಮ ಹದನೂರ, ದುರ್ಗಪ್ಪ, ಹಣಮಂತ್ರಾಯ ಝಂಡದಕೇರಾ, ರಹೀಮ್ ಹವಲ್ದಾರ್, ಎಪಿಎಫ್ ಸಂಯೋಜಕ ಕೃಷ್ಣಾ ಬಿಜಾಸ್ಪೂರ, ಕ್ಲಸ್ಟರ್‌ನ 15 ಶಾಲೆಗಳ ಪ್ರಧಾನ ಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಕಲಿಕಾ ಹಬ್ಬದಲ್ಲಿ ಎಲ್ಲಾ ಚಟುವಟಿಕೆಗಳನ್ನು ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರದರ್ಶನ ಮಾಡಿದರು. ಅಧಿಕಾರಿಗಳು, ಶಿಕ್ಷಕರು, ಪಾಲಕ, ಪೋಷಕರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಆಟ ಮತ್ತು ಚಟುವಟಿಕೆಗಳ ಮೂಲಕ ಆನಂದ ನೀಡುವ ಕಲಿಕಾ ಹಬ್ಬವು ಮಕ್ಕಳಿಗೆ ಪ್ರೋತ್ಸಾಹದಾಯಕ ಕಾರ್ಯಕ್ರಮವಾಗಿದ್ದು ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸುತ್ತದೆ. ಸರಕಾರಿ ಶಾಲೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಅಲ್ಲಿ ಶೈಕ್ಷಣಿಕವಾಗಿ ಮಾತ್ರವಲ್ಲ, ದೈಹಿಕ, ಸಾಂಸ್ಕೃತಿಕ ಸೇರಿದಂತೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಾಗುತ್ತದೆ.
-ಯಲ್ಲಪ್ಪ ಕಾಡ್ಲೂರು, ಬಿಇಒ, ಸುರಪುರ




