ಸರಕಾರದಿಂದ ಮಾಧ್ಯಮದ ಮೇಲೆ ಸವಾರಿ ಸರಿಯಲ್ಲ,ವಿವಾದಿತ ನಿಯಮಾವಳಿ ವಾಪಸ್ಸಿಗೆ ಸಂಕೀನ್ ಆಗ್ರಹ

ಸುರಪುರ ಟೈಮ್ಸ್ ವಾರ್ತೆ

ಯಾದಗಿರಿ: ರಾಜ್ಯ ಸರಕಾರ ವಿಧಾನಸೌಧದ ಅಂಗಳದಲ್ಲಿ ಮಾಧ್ಯಮಗಳು ಹೀಗೆ ಇರಬೇಕು ಎಂದು ನಿಯಾಮವಳಿ ರೂಪಿಸಿರುವುದು ಮಾಧ್ಯಮಗಳ ಮೇಲಿನ ಹತ್ತಿಕ್ಕುವ ಕೆಲಸವಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದ್ದು ಸರಕಾರ ತನ್ನ ಆದೇಶವನ್ನು ಕೂಡಲೇ ವಾಪಸ್ಸು ಪಡೆಯಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಜಾಪ್ರಭುತ್ವದ ಪವಿತ್ರ ಸ್ಥಳದಲ್ಲಿಯೇ ಮಾಧ್ಯಮಗಳಿಗೆ ಮೂಗುಧಾರ ಹಾಕುವಂತಹ ಕೆಲಸ ಮಾಡುತ್ತಿರುವುದು ಆಘಾತಕಾರಿಯಾಗಿದೆ. ಇದು ಜನರ ಧ್ವನಿಯನ್ನೇ ಕಸಿಯವಂತಹ ಕುತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ಗಂಭೀರವಾಗಿ ಪರಿಗಣಿಸಲು ಮುಂದಾಗಬೇಕಿದೆ‌‌. ಮಾಧ್ಯಮದ ಮೇಲೆ ಸವಾರಿ ಮಾಡಲು ಹೊರಟಿರುವ ಮತ್ತು ವಿವಾದಿತ ಆದೇಶ ಹೊರಡಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ವಿಧಾನ ಸೌಧದಲ್ಲಿ ಭದ್ರತೆಯ ನೆಪವೊಡ್ಡಿ ಮಾಧ್ಯಮದವರ ವಾಕ್ ಸ್ವಾತಂತ್ರ್ಯ ವನ್ನೇ ಹರಣ ಮಾಡುವಂತಹ ದುಸ್ಸಾಹಸಕ್ಕೆ ಸರಕಾರ ಕೈ ಹಾಕಿರುವುದು ನಿಜಕ್ಕೂ ಆಘಾತಕಾರಿ ಆಗಿದೆ ಎಂದು ಹೇಳಿದರು.
ಭದ್ರತೆ ಸಮಸ್ಯೆಗಳು ಇದ್ದರೇ ಸರಕಾರ ಇರುವ ಲೋಪವನ್ನು ಸರಿಪಡಿಸುವಂತಹ ಕೆಲಸ ಮಾಡಬೇಕು‌‌. ಅದು ಬಿಟ್ಟು ಮಾಧ್ಯಮಗಳ ಮೇಲೆ ಸವಾರಿ ಮಾಡಲು ಸರಕಾರ ಹೊರಟಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಮಾಧ್ಯಮಗಳಿಂದ ಯಾವುದೇ ಗಣ್ಯ ವ್ಯಕ್ತಿಗಳ ಭದ್ರತೆಗೆ ಲೋಪವಾಗುವುದಿಲ್ಲ. ಇದನ್ನು ಮೊದಲು ಸರಕಾರ ಅರಿತುಕೊಂಡು ಆಡಳಿತ ನಡೆಸಬೇಕು ಎಂದು ಒತ್ತಾಯಿಸಿದರು.
ಸರಕಾರ ಆದೇಶವನ್ನು ಕೂಡಲೇ ವಾಪಸ್ಸು ಪಡೆದು ಮಾಧ್ಯಮಗಳು ಮುಕ್ತವಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!