45 ಕ್ಕೂ ಹೆಚ್ಚು ಸಾಮೂಹಿಕ ಸಂಘಟನೆಗಳ ಪ್ರತಿಭಟನೆ | ಸುರಪುರ ಬಂದ್, ರಸ್ತೆ ತಡೆ ಹೋರಾಟದ ಎಚ್ಚರಿಕೆ ಶ್ರೀ ಪ್ರಭು ಕಾಲೇಜು ಮೈದಾನದ ಸ್ಥಳ ಯಾರಿಗೂ ಮಂಜೂರು ಮಾಡಬೇಡಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಇಲ್ಲಿಯ ಶ್ರೀ ಪ್ರಭು ಕಾಲೇಜು ಮೈದಾನದ ಸ್ಥಳವನ್ನು ಯಾವುದೇ ಕಾರಣಕ್ಕೂ ಯಾವುದೇ ಸಮಾಜಕ್ಕೂ ಮಂಜೂರು ಮಾಡಬಾರದು ಎಂದು 45 ಕ್ಕೂ ಹೆಚ್ಚು ಸಾಮೂಹಿಕ ಸಂಘಟನೆಗಳ ಮುಖಂಡರು ತಹಸೀಲ್ದಾರ್ ಕಚೇರಿ ಮುಂದೆ ಮಂಗಳವಾರ ಸುಮಾರು 3 ಗಂಟೆಗಳಿಗೆ ಹೆಚ್ಚು ಸಮಯ ಪ್ರತಿಭಟಿಸಿ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಸಾಮೂಹಿಕ ಸಂಘಟನೆಗಳ ಹಲವು ಮುಖಂಡರು ಮಾತನಾಡಿ, ಶ್ರೀ ಪ್ರಭು ಕಾಲೇಜು ಮೈದಾನದ ಸರ್ವೆ ನಂ.7/1 ಖಾರೀಜ್ ಖಾತಾ ವಿಸ್ತೀರ್ಣ 6 ಎಕರೆ 15 ಗುಂಟೆ ಜಮೀನು ಮತ್ತು ಸರ್ವೆ ನಂ.23/1 ರಲ್ಲಿ ವಿಸ್ತೀರ್ಣ೧ ಎಕರೆ 6 ಗುಂಟೆ ಗೈರಾಣು ಜಮೀನುಗಳನ್ನು ಸುಮಾರು 70 ವರ್ಷಗಳಿಂದ ಸಾರ್ವಜನಿಕರು ಬಳಕೆ ಮಾಡುತ್ತಿದ್ದು ಅವರಿಗೂ ಅನುಕೂಲವಾಗಿದ್ದು ಮತ್ತು ಸೂಕ್ತವಾದ ಸ್ಥಳವಾಗಿದೆ ಎಂದು ತಿಳಿಸಿದರು.
ಈ ಮೈದಾನ ಶಾಲಾ-ಕಾಲೇಜು ಮಕ್ಕಳು ಆಟವಾಡುವುದಕ್ಕೆ, ವಾಯು ವಿಹಾರಕ್ಕೆ ಸಹಕಾರಿಯಾಗಿದೆ ಮತ್ತು ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲು ಸಹ ಉಪಯುಕ್ತವಾಗಿದೆ. ಆದರೆ, ಒಂದು ಕೋಮಿನವರು ಅಲ್ಲಿನ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ರಾಜಕೀಯ ಒತ್ತಡ ಹಾಗೂ ಪ್ರತಿಭಟನಾ ಮುಖಾಂತರ ಜಿಲ್ಲಾಧಿಕಾರಿ ಅವರ ಮೇಲೆ ಒತ್ತಡ ಹೇರಿ ಆ ಸ್ಥಳವನ್ನು ಕಬ್ಜೆ ಪಡೆದುಕೊಂಡು ತಮ್ಮ ಸ್ವಂತಕ್ಕೆ ಬಳಸಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಕಾರಣಕ್ಕೂ ಆ ಸ್ಥಳವನ್ನು ಅವರಿಗೆ ನೀಡದೆ ಯಥಾಸ್ಥಿತಿ ಮುಂದುವರೆಸಿಕೊಂಡು ಹೋಗಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಎಚ್.ಎ.ಸರಕಾವಸ್ ಮೂಲಕ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಾಮೂಹಿಕ ಸಂಘಟನೆಗಳ ಮುಖಂಡರಾದ ರಮೇಶ ದೊರೆ ಆಲ್ದಾಳ, ಭೀಮನಗೌಡ ಲಕ್ಷ್ಮೀ, ಕಾಳಪ್ಪ ಕವಾತಿ, ನಾಗರಾಜ ನಾಯಕ ಪ್ಯಾಪಲಿ, ವೆಂಕಟೇಶ ನಾಯಕ ಬೈರಿಮರಡಿ, ಭೀಮು ನಾಯಕ ಮಲ್ಲಿಬಾವಿ, ಶಿವಮೋನಯ್ಯ ಎಲ್‌ಡಿ ನಾಯಕ ದೇವರಗೋನಾಲ, ಬಲಭೀಮ ನಾಯಕ ದೇವಾಪುರ, ಹಣಮಂತ ಬೊಮ್ಮನಹಳ್ಳಿ, ಭೀಮಾಶಂಕರ ಬಿಲ್ಲವ್, ಧರ್ಮಣ್ಣ ದೊರೆ ಕುಪಗಲ್, ದಾನಪ್ಪ ಕಡಿಮನಿ, ದತ್ತಾತ್ರೇಯ ಎಸ್.ಗುತ್ತೇದಾರ್, ವಿಜಯಕುಮಾರ ಚಿಟ್ಟಿ, ಆನಂದ ಲಕ್ಷ್ಮೀಪುರ, ಯಲ್ಲಪ್ಪ ನಾಯಕ ಕಬಾಡಗೇರಾ, ವೆಂಕಟೇಶ ನಾಯಕ ಪ್ಯಾಪ್ಲಿ, ವಾಲ್ಮೀಕಿ ನಾಯಕ, ದೇವಿಂದ್ರಪ್ಪ ವಿಶ್ವಕರ್ಮ, ಉಪೇಂದ್ರ ನಾಯಕ ಸುಬೇದಾರ್, ನಿಂಗಪ್ಪ ನಾಯಕ ಬಿಜಾಸಪೂರ, ರಂಗನಾಥಗೌಡ ಬೈರಿಮಡ್ಡಿ, ರವಿ ನಾಯಕ ಬೈರಿಮರಡ್ಡಿ, ದೇವಿಂದ್ರ ವಿಶ್ವಕರ್ಮ, ಚಂದ್ರಶೇಖರ ಎಲಿಗಾರ, ನಾಗೇಂದ್ರಪ್ಪ ದೊರೆ, ಮಲ್ಲು ವಿಷ್ಣು ಸೇನೆ, ವೆಂಕಟೇಶ ಗುಡ್ಡಕಾಯಿ, ಭಾಗನಾಥ ರುಕ್ಮಾಪುರ, ಜಗದೀಶ್ ಸುಗೂರು, ಅಂಬ್ರೇಶ ನಾಯಕ ಮಾವಿನಮಟ್ಟಿ, ದುರ್ಗಪ್ಪ ನಾಯಕ ಡೊಣ್ಣಿಗೇರೆ, ಸಂಜೀವ ನಾಯಕ ತಿಂಥಣಿ ಸೇರಿ ಅನೇಕರಿದ್ದರು.
ಸುರಪುರ ನಿರಂತರ ಬಂದ್ ಕರೆ
ಒಂದು ವೇಳೆ ಒಂದು ಕೋಮಿನವರಿಗೆ ಸ್ಥಳ ಮಂಜೂರು ಮಾಡಿದ್ದಲ್ಲಿ ಸುರಪುರ ನಿರಂತರ ಬಂದ್ ಕರೆ ನೀಡಿ ರಸ್ತೆ ತಡೆ ಸಂಚಾರ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸಾಮೂಹಿಕ ಸಂಘಟನೆಗಳ ಮುಖಂಡರು ಜಿಲ್ಲಾ ಮತ್ತು ತಾಲೂಕು ಆಡಳಿತಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.






