ಲಕ್ಷ್ಮೀಪುರದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಆಚರಣೆ|ರೇಣುಕಾಚಾರ್ಯರ ತತ್ವಗಳು ಸಮಾಜದ ಸಮಾನತೆಗೆ ದಾರಿದೀಪ; ಡಾ.ಸುರೇಶ ಸಜ್ಜನ್
ಸುರಪುರ ಟೈಮ್ಸ್ ವಾರ್ತೆ
ಸುರಪುರ: ಜಗದ್ಗುರು ಶ್ರೀ ರೇಣುಕಾಚಾರ್ಯರು “ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ಮಹೋನ್ನತ ಸಂದೇಶ ಸಾರಿದ ಮಹಾತ್ಮರು. ಅವರ ಆದರ್ಶ ಹಾಗೂ ತತ್ವ-ಸಿದ್ಧಾಂತಗಳು ಸಮಾಜದ ಸಮಾನತೆಗೆ ದಾರಿದೀಪ ಎಂದು ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸುರೇಶ ಸಜ್ಜನ್ ಅಭಿಪ್ರಾಯಪಟ್ಟರು.
ತಾಲೂಕಿನ ಲಕ್ಷ್ಮೀಪುರ ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬೇಡ ಜಂಗಮ ಸಮಾಜ ಬಾಂಧವರು ಭಾನುವಾರ ಹಮ್ಮಿಕೊಂಡಿದ್ದ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತ್ಯುತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ರೇಣುಕಾಚಾರ್ಯರ ತತ್ವಗಳು ಸಮಾಜದ ಸಮಾನತೆ, ಧಾರ್ಮಿಕ ಸಾಮರಸ್ಯ ಮತ್ತು ಆಧ್ಯಾತ್ಮಿಕ ಪ್ರಗತಿಗೆ ದಾರಿದೀಪದಂತಿವೆ. ಇಂತಹ ಮಹಾತ್ಮರ ಜಯಂತಿ ಆಚರಣೆ ಇಂದಿನ ಪೀಳಿಗೆಗೆ ಪೂರ್ವಜರ ಮಹತ್ಕಾರ್ಯ ಹಾಗೂ ಜನಸೇವೆಯ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ನಮ್ಮ ಸಂಸ್ಕೃತಿ-ಪರಂಪರೆಯ ಬಗ್ಗೆ ಹೆಮ್ಮೆಪಡುವಂತೆ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಗಿರಿ ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಕಡ್ಲಪ್ಪನವರ ನಿಷ್ಠಿ ವಿರಕ್ತ ಮಠದ ಪ್ರಭುಲಿಂಗ ಸ್ವಾಮೀಜಿ, ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ ಸೇರಿದಂತೆ ಹಲವು ಪೂಜ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರೇಣುಕಾಚಾರ್ಯರ ಧರ್ಮನಿಷ್ಠೆ, ಸಮಾಜದ ಏಕತೆಗಾಗಿ ನೀಡಿದ ಕೊಡುಗೆಗಳ ಕುರಿತು ತಿಳಿಸಿದರು.
ಪ್ರಮುಖರಾದ ಸುಗೂರೇಶ ವಾರದ, ಪ್ರಕಾಶ ಅಂಗಡಿ ಕನ್ನೆಳ್ಳಿ, ಜಂಗಮ ಸಮಾಜದ ತಾಲೂಕು ಅಧ್ಯಕ್ಷ ಸುನೀಲ್ ಪಂಚಾಂಗಮಠ, ಲಕ್ಷ್ಮೀಪುರ ಗ್ರಾಮ ಘಟಕದ ಅಧ್ಯಕ್ಷ ಪ್ರಭಯ್ಯ ಸ್ವಾಮಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಸಮಾಜದ ಅನೇಕ ಮುಖಂಡರು, ಬಾಂಧವರು ಹಾಗೂ ಭಕ್ತರು ಭಾಗವಹಿಸಿದ್ದರು.
ಶಿಕ್ಷಕರಾದ ಮಲ್ಲಿಕಾರ್ಜುನ ಜೆಟಗಿಮಠ ಕಾರ್ಯಕ್ರಮವನ್ನು ನಿರೂಪಿಸಿದರು. ವಿಶ್ವರಾಧ್ಯ ಪುರಾಣಿಕಮಠ ವಂದಿಸಿದರು. ಕಾರ್ಯಕ್ರಮದ ಪೂರ್ವದಲ್ಲಿ ಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಶ್ರೀಗಿರಿ ಮಠದ ಆವರಣದಿಂದ ಜಗದ್ಗುರು ಶ್ರೀ ರೇಣುಕಾಚಾರ್ಯರ ಭಾವಚಿತ್ರದ ಭವ್ಯ ಮೆರವಣಿಗೆ ಶ್ರದ್ಧಾ-ಭಕ್ತಿಯೊಂದಿಗೆ ಅದ್ಧೂರಿಯಾಗಿ ಜರುಗಿತು.




