ಮಾ.6 ರಂದು ಮೆರವಣಿಗೆ, ರುದ್ರಪೂಜೆ, ಸತ್ಸಂಗ – ಭಕ್ತಿಭಾವದ ಸಂಭ್ರಮಕ್ಕೆ ರಂಗಂಪೇಠ ಸಜ್ಜು|ಸೋಮನಾಥ ಜ್ಯೋತಿರ್ಲಿಂಗ ದಿವ್ಯ ದರ್ಶನದಿಂದ ಪುನೀತರಾಗುವ ಅವಕಾಶ ; ಶಿಲ್ಪಾ ಆವಂಟಿ

ಸುರಪುರ ಟೈಮ್ಸ್ ವಾರ್ತೆ
ಸುರಪುರ :ಸಮೀಪದ ರಂಗಪೇಟೆಯ ಶ್ರೀ ಈಶ್ವರ ಬನಶಂಕರಿ ದೇವಸ್ಥಾನದಲ್ಲಿ ಮಾ.6 ಶುಕ್ರವಾರ ಸಂಜೆ 5.30 ರಿಂದ ರಾತ್ರಿ 9 ಗಂಟೆಯವರೆಗೆ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ರವಿಶಂಕರ ಅವರ ಸಂಸ್ಥೆಯಾದ ಹಾರ್ಟ್ ಆಫ್ ಲಿವಿಂಗ್ ಪ್ರಮುಖರಾದ ಶಿಲ್ಪಾ ಆವಂಟಿ ತಿಳಿಸಿದರು.
ಭಾನುವಾರ ದೇವಸ್ಥಾನದಲ್ಲಿ ಜರುಗಿದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುರೂಜಿ ಅವರ ಆಶ್ರಮದಿಂದ ಆಯೋಜಿಸಲಾದ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಯಾತ್ರೆ ಪ್ರಥಮವಾಗಿ ಬೀದರ್‌ನಲ್ಲಿ ಆರಂಭಗೊಂಡು ಕಲಬುರಗಿ ಮುಗಿಸಿ ಶಹಾಪುರ ಮಾರ್ಗವಾಗಿ ಮಾ.6 ರಂದು ಸಂಜೆ ನಾಲ್ಕು ಗಂಟೆಗೆ ರಂಗಪೇಟೆಗೆ ಆಗಮಿಸಲಿದೆ ಎಂದರು.
ರಂಗಪೇಟೆಯ ಕನ್ನಡ ಸಾಹಿತ್ಯ ಸಂಘದ ಕಚೇರಿ ಆವರಣದಿಂದ ಮೆರವಣಿಗೆ ಪ್ರಾರಂಭವಾಗಿ ಪ್ರಮುಖ ಬೀದಿಗಳ ಮೂಲಕ ಶ್ರೀ ಈಶ್ವರ ಬನಶಂಕರಿ ದೇವಸ್ಥಾನಕ್ಕೆ ತಲುಪಲಿದೆ. ವಿವಿಧ ಮಂಗಳ ವಾದ್ಯಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ. ನಂತರ ದೇವಸ್ಥಾನದಲ್ಲಿ ರುದ್ರ ಪೂಜೆ ಹಾಗೂ ಸತ್ಸಂಗ ಜರುಗಲಿದ್ದು, ಸದ್ಭಕ್ತರಿಗೆ ಜ್ಯೋತಿರ್ಲಿಂಗದ ದರ್ಶನ ಭಾಗ್ಯ ಕಲ್ಪಿಸಲಾಗುವುದು. ದರ್ಶನ ಬಳಿಕ ಪ್ರಸಾದ ವಿತರಣೆ ನಡೆಯಲಿದ್ದು, ಬಳಿಕ ಯಾತ್ರೆ ಕೆಂಭಾವಿ ಪಟ್ಟಣದತ್ತ ಪ್ರಯಾಣಿಸಲಿದೆ ಎಂದು ವಿವರಿಸಿದರು.
ಕೆವೈಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ. ಸುರೇಶ್ ಸಜ್ಜನ್ ಮಾತನಾಡಿ, ಈ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ದೇವಸ್ಥಾನದಲ್ಲಿ ದರ್ಶನಕ್ಕೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಆಗಮಿಸಿ ದಿವ್ಯ ಲಿಂಗದರ್ಶನ ಪಡೆದು ಪುನೀತರಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅರ್ಚಕ ನಿಂಗಯ್ಯಸ್ವಾಮಿ ಹಿರೇಮಠ, ಸೋಮಶೇಖರ ಶಾಬಾದಿ, ಶಿವಶರಣಪ್ಪ ಗುಮ್ಮಾ, ಶರಣಪ್ಪ ಕಲಕೇರಿ, ಚಂದ್ರಶೇಖರ ಮುದನೂರ, ಸಂಗಪ್ಪ ಚೆಟ್ಟಿ, ಪ್ರಕಾಶ ಅಂಗಡಿ ಕನ್ನೆಳ್ಳಿ, ಸಂಗನಗೌಡ ಕೋಳಿಹಾಳ, ಶರಣಬಸವ ಚೆಟ್ಟಿ, ಅಮರೇಶ ಕುಂಬಾರ, ರಾಜೇಶ್ವರಿ ಗೋಲಗೇರಿ, ಮಾಧುರಿ ಕಲಕುಂಡ, ಜ್ಯೋತಿ ಶಾಬಾದಿ, ಪದ್ಮಾಕ್ಷೀ ಶಹಾಪುರಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾವಿರಾರು ವರ್ಷಗಳ ಇತಿಹಾಸದ ಲಿಂಗ
ಕ್ರಿ.ಶ. 1026 ರಲ್ಲಿ ಗುಜರಾತಿನ ಸೋಮನಾಥ ದೇವಸ್ಥಾನದ ಮೇಲೆ ಮಹ್ಮದ್ ಘಜ್ನಿ ಆಕ್ರಮಣ ನಡೆಸಿ ದೇವಸ್ಥಾನವನ್ನು ಧ್ವಂಸಗೊಳಿಸಿದ್ದಾನೆ ಎಂಬ ಐತಿಹಾಸಿಕ ಉಲ್ಲೇಖಗಳಿವೆ. ಆ ಸಂದರ್ಭದಲ್ಲಿ ಶಿವಲಿಂಗದ ಕೆಲವು ಭಾಗಗಳನ್ನು ಅಗ್ನಿಹೋತ್ರಿ ಪುರೋಹಿತರು ರಹಸ್ಯವಾಗಿ ಸಂರಕ್ಷಿಸಿದರೆಂದು ಹೇಳಲಾಗುತ್ತದೆ. ನಂತರ ಆ ಚೂರುಗಳಿಗೆ ಲಿಂಗಾಕಾರ ನೀಡಿ ತಲೆತಲಾಂತರಗಳಿಂದ ಸಂರಕ್ಷಿಸಿ ಬಂದಿದ್ದಾರೆ ಎಂಬ ಪರಂಪರೆ ಪ್ರಸಿದ್ಧವಾಗಿದೆ.
ಇದೀಗ ಹಾರ್ಟ್ ಆಫ್ ಲಿವಿಂಗ್ ಆಶ್ರಮದಿಂದ ಸೋಮನಾಥ ಜ್ಯೋತಿರ್ಲಿಂಗ ದರ್ಶನ ಯಾತ್ರೆ ಆಯೋಜಿಸಲಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಭಕ್ತರಿಗೆ ದರ್ಶನ ಅವಕಾಶ ಕಲ್ಪಿಸಲಾಗುತ್ತಿದೆ. ಇದು ಭಕ್ತರಿಗೆ ದೊರಕಿದ ಅಪೂರ್ವ ಭಾಗ್ಯವೆಂದು ಶಿಲ್ಪಾ ಆವಂಟಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!