ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ 2568ನೇ ಪಾಲ್ಗುಣಾ ಪೂರ್ಣಿಮೆ ಆಚರಣೆ |ಶ್ರದ್ಧಾ-ಭಕ್ತಿಯಿಂದ ಪಾಲ್ಗುಣಾ ಪೂರ್ಣಿಮಾ ಆಚರಿಸಿದ ಬೌದ್ಧ ಅನುಯಾಯಿಗಳು

ಸುರಪುರ ಟೈಮ್ಸ್ ವಾರ್ತೆ
ಸುರಪುರ; ನಗರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಮಂಗಳವಾರ ಟ್ರಸ್ಟ್ ವತಿಯಿಂದ 2568ನೇ ಪಾಲ್ಗುಣಾ ಪೂರ್ಣಿಮೆಯನ್ನು ಬೌದ್ಧ ಅನುಯಾಯಿಗಳ ಕುಟುಂಬಗಳ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮವು ಸಾಮೂಹಿಕ ಪಂಚಶೀಲ ಪಠಣದೊಂದಿಗೆ ಆರಂಭಗೊಂಡಿತು.
ಬೌದ್ಧ ಉಪಾಸಕರು ಹಾಗೂ ಉಪಾಸಿಕರು ತಮ್ಮ ಮಕ್ಕಳೊಂದಿಗೆ ಹೂವು, ಹಣ್ಣು, ಮೇಣದ ಬತ್ತಿಗಳೊಂದಿಗೆ ಆಗಮಿಸಿ ಭಗವಾನ್ ಬುದ್ಧರ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿ, ಮೇಣದ ಬತ್ತಿ ಹಚ್ಚಿ ಪ್ರಾರ್ಥಿಸಿದರು. ಧಮ್ಮದ ಮಹತ್ವವನ್ನು ಸ್ಮರಿಸುವ ಮೂಲಕ ಭಕ್ತಿ ಮತ್ತು ಶಾಂತಿಯ ವಾತಾವರಣ ನಿರ್ಮಾಣವಾಯಿತು.
ಯಾದಗಿರಿ ಜಿಲ್ಲೆಯ ದಲಿತ ಚಳುವಳಿ ಕುರಿತು ಮಹಾ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಇತ್ತೀಚೆಗೆ ಡಾಕ್ಟರೇಟ್ ಪದವಿ ಪಡೆದ ಉಪನ್ಯಾಸಕ ಮಲ್ಲಪ್ಪ ಹಣಮಂತ ಕೆಸಿಪಿ ಮುಷ್ಠಳ್ಳಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದಲ್ಲದೆ, ಫೆಬ್ರವರಿಯಲ್ಲಿ ನಡೆದ ಮಹಾಬೋಧಿ ಮಹಾ ವಿಹಾರ ಮುಕ್ತಿ ಆಂದೋಲನದ ಯಶಸ್ಸಿಗೆ ನೇತೃತ್ವ ವಹಿಸಿದ್ದ ಬೌದ್ಧ ಉಪಾಸಕ ರಾಹುಲ್ ಹುಲಿಮನಿ ಅವರ ಧಮ್ಮ ಸೇವೆಯನ್ನು ಮೆಚ್ಚಿ, ಬೌದ್ಧ ಉಪಾಸಿಕಾ ಹಾಗೂ ನ್ಯಾಯವಾದಿ ಶರ್ಮಿಳಾ ಎಂ. ಕರಡಕಲ್ ಅವರು ಎಲ್ಲ ಬೌದ್ಧ ಅನುಯಾಯಿಗಳ ಪರವಾಗಿ ಜಿಬಿಟಿ ಟ್ರಸ್ಟ್ ಆಡಳಿತ ಮಂಡಳಿಯೊಂದಿಗೆ ರಾಹುಲ್ ಹುಲಿಮನಿ ದಂಪತಿಗಳನ್ನು ಸತ್ಕರಿಸಿದರು.


ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಬುದ್ಧ ವಿಹಾರದ ಮಹತ್ವ ಅರಿತು ಹೆಚ್ಚಿನ ಸಂಖ್ಯೆಯಲ್ಲಿ ಉಪಾಸಕ ಬಂಧುಗಳು ಭಾಗವಹಿಸಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶರ್ಮಿಳಾ ಕರಡಕಲ್, ಮಾಳಪ್ಪ ಕಿರದಳ್ಳಿ, ರಾಜು ದೊಡ್ಡಮನಿ, ಚಂದಪ್ಪ ಪಂಚಮ್, ಪರಶು ನಾಟೇಕಾರ, ಹಣಮತ ತೇಲ್ಕರ್, ಭೀಮಬಾಯಿ ಕಲ್ಲದೇವನಹಳ್ಳಿ, ಮಂಜುಳಾ ಸುರಪುರ, ಶಿಲ್ಪಾ ಹುಲಿಮನಿ, ಸುನೀತಾ ಕಿರದಳ್ಳಿ, ಯಲ್ಲಮ್ಮ ತೇಲ್ಕರ್, ಗಣೇಶ ದೇವಿಕೇರಿ, ನಾಗರಾಜ ಬೇವಿನಾಳ, ಅವಿನಾಶ ಚಿಕನಳ್ಳಿ, ಸುರೇಶ್, ಸಂಪ್ರೀತ್ ಹುಲಿಮನಿ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಮೇ ತಿಂಗಳಲ್ಲಿ ಶ್ರೀಲಂಕಾ ಶಿಲ್ಪಿಯಿಂದ ನಿರ್ಮಿಸಲಾದ ಭಗವಾನ್ ಬುದ್ಧರ ಮೂರ್ತಿ ಲೋಕಾರ್ಪಣೆ ಹಾಗೂ ಸಾಮೂಹಿಕ ಬೌದ್ಧ ಸಂಸ್ಕಾರದ ವಿವಾಹಗಳನ್ನು ಏರ್ಪಡಿಸುವ ಸಂಬಂಧ ಸಲಹೆ–ಸೂಚನೆಗಳನ್ನು ನೀಡಲು ಮಾರ್ಚ್ 7 ರಂದು ಬೆಳಗ್ಗೆ 11 ಗಂಟೆಗೆ ಬುದ್ಧ ವಿಹಾರದಲ್ಲಿ ಎಲ್ಲ ದಲಿತ ಸಂಘಟನೆಗಳ ಮತ್ತು ಬೌದ್ಧ ಉಪಾಸಕರ ಸಭೆ ಕರೆದಿರುವುದಾಗಿ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸಮನಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!