ಬೇಸಿಗೆಯಲ್ಲಿ ನೆರಳು–ಕುಡಿಯುವ ನೀರಿನ ವ್ಯವಸ್ಥೆಗೆ ಜೆಡಿಎಸ್ ಮನವಿ |ನಗರಸಭೆಯ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಕೆ.
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಬೇಸಿಗೆ ದಿನಗಳಲ್ಲಿ ಗ್ರಾಮೀಣ ಭಾಗಗಳಿಂದ ವಿವಿಧ ಕೆಲಸಗಳ ನಿಮಿತ್ತ ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಪ್ರಮುಖ ಸ್ಥಳಗಳಲ್ಲಿ ನೆರಳಿನ ವ್ಯವಸ್ಥೆ ಹಾಗೂ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಜೆಡಿಎಸ್ ಮುಖಂಡರು ಸೋಮವಾರ ನಗರಸಭೆ ವ್ಯವಸ್ಥಾಪಕ ಯಲ್ಲಪ್ಪನಾಯಕ ಡೊಣ್ಣಿಗೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ಹಿರಿಯ ಮುಖಂಡ ದೇವಿಂದ್ರಪ್ಪ ಬಳಿಚಕ್ರ ಅವರು, ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚುತ್ತಿದ್ದು, ಮಧ್ಯಾಹ್ನ ಸಮಯದಲ್ಲಿ ಜನರಿಗೆ ಬಹಳ ತೊಂದರೆ ಉಂಟಾಗುತ್ತಿದೆ ಎಂದು ಹೇಳಿದರು. ನಗರಕ್ಕೆ ವಿವಿಧ ಕೆಲಸಗಳಿಗಾಗಿ ಬರುವ ಗ್ರಾಮೀಣ ಭಾಗದ ಜನರು ವಿಶ್ರಾಂತಿ ಪಡೆಯಲು ಮುಖ್ಯ ಸಾರ್ವಜನಿಕ ಸ್ಥಳಗಳಲ್ಲಿ ಟೆಂಟ್ ಅಥವಾ ಶೆಡ್ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಜನರಿಗೆ ದಾಹ ನೀಗಿಸಲು ಪ್ರಮುಖ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಸಿಮೆಂಟ್ ಬೆಂಚ್‌ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ವಿಶ್ರಾಂತಿ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.
ಇದರ ಜೊತೆಗೆ ಸರ್ಕಾರಿ ಖಾಲಿ ಜಾಗಗಳಲ್ಲಿ ಮರ ಮತ್ತು ಗಿಡಗಳನ್ನು ನೆಟ್ಟು ಬೆಳೆಸುವುದರಿಂದ ಪರಿಸರ ಸಂರಕ್ಷಣೆ ಜೊತೆಗೆ ಜನರಿಗೆ ನೆರಳಿನ ವ್ಯವಸ್ಥೆಯೂ ಸಾಧ್ಯವಾಗುತ್ತದೆ ಎಂದು ಹೇಳಿದರು. ಬೇಸಿಗೆಯ ಪ್ರಖರತೆ ಹೆಚ್ಚುತ್ತಿರುವುದರಿಂದ ಪ್ರಮುಖ ರಸ್ತೆಗಳಿಗೆ ಪ್ರತಿದಿನ ನೀರು ಸಿಂಪಡಿಸುವ ಮೂಲಕ ಧೂಳು ಮತ್ತು ಉಷ್ಣತೆಯನ್ನು ಕಡಿಮೆ ಮಾಡುವಂತೆ ಕೂಡ ಅವರು ಒತ್ತಾಯಿಸಿದರು.
ನಗರದ ವಿವಿಧ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ತಕ್ಷಣ ಮುಚ್ಚಿ ದುರಸ್ತಿ ಮಾಡಬೇಕು. ರಾತ್ರಿ ವೇಳೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲೆಡೆ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಅವರು ಹೇಳಿದರು.
ಕಟ್ಟಡ ಪರವಾನಗಿಗಳನ್ನು ನಿಯಮಾನುಸಾರ ನೀಡುವಂತೆ ಕ್ರಮ ಕೈಗೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಆಯ್ಕೆ ಹಾಗೂ ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತಿ ವಾರ್ಡ್‌ನಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಬೇಕು ಎಂದು ಜೆಡಿಎಸ್ ಮುಖಂಡರು ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ತಿಪ್ಪಣ್ಣ ಪಾಟೀಲ, ಶಾಂತು ತಳವಾರಗೇರಾ, ಭೀಮರಾಯ ಹುಲಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

