ಮಹಿಳಾ ದಿನಾಚರಣೆಯಲ್ಲಿ ಪಂಚ ಗ್ಯಾರಂಟಿ ಅರಿವು ಕಾರ್ಯಕ್ರಮ| ಮಹಿಳಾ ಸಬಲೀಕರಣಕ್ಕೆ ಶಿಕ್ಷಣವೇ ಶಕ್ತಿ : ಸಿಡಿಪಿಒ ಪೀರಾಪುರ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಮಹಿಳೆಯರು ಶಿಕ್ಷಣಕ್ಕೆ ಆದ್ಯತೆ ನೀಡುವುದರ ಮೂಲಕ ತಮ್ಮ ಬದುಕು ರೂಪಿಸಿಕೊಳ್ಳಬೇಕು. ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬದ ಭವಿಷ್ಯ ಸುಭದ್ರವಾಗುತ್ತದೆ. ಮಹಿಳಾ ಸಬಲೀಕರಣಕ್ಕೆ ಶಿಕ್ಷಣ ಅತ್ಯಂತ ಅಗತ್ಯವಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಾಲ್‌ಸಾಬ್ ಪೀರಾಪುರ ಹೇಳಿದರು.
ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಪಂಚ ಗ್ಯಾರಂಟಿ ಯೋಜನೆಗಳ ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಿಳೆಯರು ಶಿಕ್ಷಣವಂತರಾಗಬೇಕು. ಶಿಕ್ಷಣದಲ್ಲಿ ಅಪಾರ ಶಕ್ತಿಯಿದ್ದು, ಮಕ್ಕಳಿಗೂ ಉತ್ತಮ ಶಿಕ್ಷಣ ಒದಗಿಸಬೇಕು. ಹಕ್ಕು, ಸೌಲಭ್ಯ ಹಾಗೂ ಕಾನೂನುಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು.
ಇಂದು ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ ಇನ್ನೂ ಸಂಪೂರ್ಣ ಸಬಲೀಕರಣವಾಗಿಲ್ಲ. ಲಿಂಗ ತಾರತಮ್ಯ, ಬಾಲ್ಯ ವಿವಾಹ ಸೇರಿದಂತೆ ಹಲವು ಸಾಮಾಜಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳು ಮಹಿಳಾ ಸಬಲೀಕರಣದಲ್ಲಿ ಮಹತ್ತರ ಪಾತ್ರವಹಿಸಿವೆ. ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಇದುವರೆಗೆ 300 ಕೋಟಿ ರೂ. ಅನುದಾನ ನೀಡಲಾಗಿದೆ. ಮಹಿಳೆಯರು ಈ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಬೀರಲಿಂಗ ಬಾದ್ಯಾಪುರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದರು.
ತಾಪಂನ ಶರಣಗೌಡ, ಆರೋಗ್ಯ ಇಲಾಖೆಯ ನಿಂಗಮ್ಮ ಹಾಗೂ ಅಂಗನವಾಡಿ ಶಿಕ್ಷಕಿ ಲಕ್ಷ್ಮಿ ಮಾತನಾಡಿದರು. ಜೆಸ್ಕಾಂ ಎಇಇ ರಫೀಕ್, ಗ್ಯಾರಂಟಿ ಯೋಜನೆ ಸದಸ್ಯ ಪಾರಪ್ಪ ದೇವತ್ಕಲ್, ಶಿಕ್ಷಣ ಸಂಯೋಜಕ ಸೋಮಶೇಖರ, ತಹಸೀಲ್ದಾರ್ ಕಚೇರಿಯ ಚಿದಾನಂದ, ತಾಪಂನ ನಾಗರಾಜ್, ಮೇಲ್ವಿಚಾರಕಿಯರಾದ ಗುರುದೇವಿ ಹಿರೇಮಠ, ಸಂಗಮ್ಮ ಹಾವೇರಿ, ಪದ್ಮಾವತಿ ಡಿ. ನಾಯಕ, ಚಂದ್ರಲೀಲಾ ಬಿಲ್ಲವ್ ಹಾಗೂ ಸುಪರಿಂಟೆಂಡೆಂಟ್ ಭೀಮಾಶಂಕರ ನಾಯಕ, ಜಯಶ್ರೀ ಬಿರಾದಾರ, ಸುನೀತಾ ಸತ್ಯಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
ತಾಲೂಕು ಮಟ್ಟದ ಮಹಿಳಾ ಕ್ರೀಡಾಕೂಟದಲ್ಲಿ ವಿಜೇತರಾದ ಮಹಿಳೆಯರನ್ನು ಸತ್ಕರಿಸಲಾಯಿತು. ಮೇಲ್ವಿಚಾರಕಿ ಕವಿತಾ ಬಡಿಗೇರ್ ಪ್ರಾರ್ಥನಾ ಗೀತೆ ಹಾಡಿದರು. ಸಿದ್ದಮ್ಮ ಜಾನಕಿ ಸ್ವಾಗತಿಸಿದರು. ಸಾವಿತ್ರಿ ಗಾಳಿ ನಿರೂಪಿಸಿದರು. ಶಶಿಕಲಾ ಗಾಳಿ ವಂದಿಸಿದರು.




ಮನಸ್ಥಿತಿ ಬದಲಾಗಬೇಕು
ಪುರುಷ ಸಮಾಜದಲ್ಲಿ ಮಹಿಳೆಯರ ಬಗ್ಗೆ ಇರುವ ಮನಸ್ಥಿತಿ ಇನ್ನೂ ಸಂಪೂರ್ಣವಾಗಿ ಬದಲಾಗಿಲ್ಲ. ಮಹಿಳೆಯರಿಗೆ ಗೌರವ ನೀಡಲು ಕಲಿತಾಗ ಹಾಗೂ ದೌರ್ಜನ್ಯ ಮತ್ತು ದಬ್ಬಾಳಿಕೆ ಕೊನೆಗೊಂಡಾಗ ಮಾತ್ರ ನಿಜವಾದ ಮಹಿಳಾ ಸಬಲೀಕರಣ ಸಾಧ್ಯ. ಮಹಿಳಾ ದಿನಾಚರಣೆಯ ಮೂಲಕ ಮಹಿಳೆಯರ ಹಕ್ಕುಗಳು, ಕಾನೂನುಗಳು ಹಾಗೂ ಸಬಲೀಕರಣದ ಬಗ್ಗೆ ಅರಿವು ಮೂಡಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಿಡಿಪಿಒ ಲಾಲ್‌ಸಾಬ್ ಪೀರಾಪುರ ತಿಳಿಸಿದರು.
ಈ ವರ್ಷದ ಮಹಿಳಾ ದಿನಾಚರಣೆಯ ಧ್ಯೇಯವಾಕ್ಯ “ಸದೃಢ ಮಹಿಳೆ – ಸಶಕ್ತ ಭಾರತ” ಎಂದು ಅವರು ಹೇಳಿದರು.
ಆರೋಗ್ಯದ ಕಾಳಜಿ ಅಗತ್ಯ
ವೃತ್ತಿ ಹಾಗೂ ಕುಟುಂಬ ಎರಡನ್ನೂ ಸಮಾನವಾಗಿ ನಿಭಾಯಿಸಬೇಕಾದ ಮಹಿಳೆಯರಿಗೆ ಅನೇಕ ಸವಾಲುಗಳು ಎದುರಾಗುತ್ತವೆ. ಇಂತಹ ಸಂದರ್ಭದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು. ಒಬ್ಬ ಮಹಿಳೆ ಆರೋಗ್ಯವಾಗಿದ್ದರೆ ಆಕೆಯ ಕುಟುಂಬವೂ ಆರೋಗ್ಯವಾಗಿರುತ್ತದೆ ಎಂದು ಆರೋಗ್ಯ ಇಲಾಖೆಯ ನಿಂಗಮ್ಮ ಹೇಳಿದರು.
ಆರೋಗ್ಯ ಇಲಾಖೆ ಮತ್ತು ಐಸಿಡಿಎಸ್ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳಂತಿವೆ. ಗರ್ಭಿಣಿ ನೋಂದಣಿಯಿಂದ ಮಗುವಿನ 16 ವರ್ಷದವರೆಗೆ ಪಾಲನೆ-ಪೋಷಣೆ, ಲಸಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಾಯಿ-ತಂದೆಯರಂತೆ ಕಾಳಜಿ ವಹಿಸುತ್ತಾರೆ. ಅವರ ಸೇವೆ ಅನನ್ಯವಾಗಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.


