ಬಡವರಿಗೆ ಆಶಾಕಿರಣ: ಬೋನ್ಹಾಳದ ಮಲ್ಲಮ್ಮ ಹಡಪದ ಅವರಿಗೆ ವಾತ್ಸಲ್ಯ ಮನೆ|ನಿರ್ಗತಿಕರಿಗೆ ಮನೆ ನಿರ್ಮಿಸಿ ನೀಡುವ ಧರ್ಮಸ್ಥಳ ಸಂಸ್ಥೆಯ ಸಮಾಜಮುಖಿ ಸೇವೆ
ಸುರಪುರ ಟೈಮ್ಸ್ ವಾರ್ತೆ
ಸುರಪುರ: ತಾಲೂಕಿನ ಬೋನ್ಹಾಳ ಗ್ರಾಮದ ಮಸಾಶನ ಫಲಾನುಭವಿ ಮಲ್ಲಮ್ಮ ಅವರಿಗೆ ವಾತ್ಸಲ್ಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ ನಿರ್ಮಿಸಲಾದ ವಾತ್ಸಲ್ಯ ಮನೆಯನ್ನು ಗುರುವಾರ ಹಸ್ತಾಂತರಿಸಲಾಯಿತು. ಸುಮಾರು ₹1.35 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ನಾಗೇಶ್ ಎನ್‌ಪಿ, ರಾಜ್ಯದಾದ್ಯಂತ ನಿರ್ಗತಿಕರು ಹಾಗೂ ಸೂರಿಲ್ಲದ ಬಡವರಿಗೆ ಧರ್ಮಸ್ಥಳ ಸಂಸ್ಥೆಯಿಂದ ವಾತ್ಸಲ್ಯ ಮನೆಗಳನ್ನು ನಿರ್ಮಿಸಿ ನೀಡಲಾಗುತ್ತಿದೆ. ಸುರಪುರ ತಾಲೂಕಿನಲ್ಲಿ ಇದುವರೆಗೆ ಒಟ್ಟು 11 ವಾತ್ಸಲ್ಯ ಮನೆಗಳ ನಿರ್ಮಾಣ ಕಾರ್ಯ ನಡೆದಿದ್ದು, ಪ್ರತಿ ಮನೆ ಸುಮಾರು ಒಂದು ಲಕ್ಷ ಮೂವತ್ತೈದು ಸಾವಿರ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದರು.


ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸ್ತ್ರೀ ಶಕ್ತಿ ಸಂಘಗಳಿಗೆ ಪ್ರೋತ್ಸಾಹ, ಸಾಲ ಸೌಲಭ್ಯ, ಮದ್ಯವರ್ಜನೆ ಜಾಗೃತಿ, ದೇವಸ್ಥಾನಗಳ ಜೀರ್ಣೋದ್ಧಾರ, ಕೃಷಿ ಅಭಿವೃದ್ಧಿ, ಕೆರೆ-ಹೊಳೆ ಪುನರುಜ್ಜೀವನ, ಸಮುದಾಯ ಅಭಿವೃದ್ಧಿ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅಲ್ಲದೆ ಶಾಲಾ-ಕಾಲೇಜುಗಳಿಗೆ ಡೆಸ್ಕ್–ಬೆಂಚ್ ವಿತರಣೆ, ಸುಜ್ಞಾನ ನಿಧಿ ಶಿಷ್ಯವೇತನ, ಜ್ಞಾನದೀಪ ಶಿಕ್ಷಕರ ನೇಮಕ, ಹಿಂದೂ ರುದ್ರಭೂಮಿ ಅಭಿವೃದ್ಧಿ, ಜಲ ಮಂಗಲ ಸೇರಿದಂತೆ ಹಲವು ಯೋಜನೆಗಳನ್ನು ಸಂಸ್ಥೆ ಅನುಷ್ಠಾನಗೊಳಿಸುತ್ತಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಕೃಷಿ ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿ ಅಧ್ಯಕ್ಷ ರಾಜಾ ಸಂತೋಷ ನಾಯಕ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ದಂಡಿನ್, ಮುಖಂಡ ಸಂಗನಗೌಡ ಬೆಳ್ಳಿ, ಮಲ್ಲಿಕಾರ್ಜುನ ಹಿರೇಮಠ ಜಿಲ್ಲಾ ಜನ ಜಾಗೃತಿ ವೇದಿಕೆ ಕೋಶಾಧಿಕಾರಿ ಸುಗೂರೇಶ ವಾರದ, ಉಪಾಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ, ವೀರಭದ್ರಯ್ಯಸ್ವಾಮಿ ಬೋನ್ಹಾಳ, ಬಸಯ್ಯ ಹಿರೇಮಠ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅನಿತಾ, ವಲಯ ಮೇಲ್ವಿಚಾರಕರು ಶಿವಕಲಾ , ಒಕ್ಕೂಟದ ಅಧ್ಯಕ್ಷರು, ಸಂಘದ ಸದಸ್ಯರು ಹಾಗೂ ವಲಯದ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.


