ರೈತರ ಸಂಕಷ್ಟ ತಪ್ಪಿಸಲು ನೀರಾವರಿ ಸಭೆ ಅಗತ್ಯ; ಶಾಸಕ ಆರ್ವಿಎನ್
ಸುರಪುರ ಟೈಮ್ಸ್ ವಾರ್ತೆ
ಸುರಪುರ: 2025-26 ನೇ ಸಾಲಿನ ಹಿಂಗಾರು ಹಂಗಾಮಿಗೆ ರೈತರ ಜಮೀನುಗಳಿಗೆ ಕಾಲುವೆ ಮುಖಾಂತರ ನೀರು ಪೂರೈಸಲು ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಕರೆಯಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಆಗ್ರಹಿಸಿದ್ದಾರೆ.
ಈ ಕುರಿತು ಅಬಕಾರಿ ಸಚಿವ ಮತ್ತು ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷರಾದ ಆರ್.ಬಿ.ತಿಮ್ಮಾಪುರಿ ಅವರಿಗೆ ಪತ್ರ ಬರೆದಿರುವ ಅವರು, ನನ್ನ ಮತಕ್ಷೇತ್ರದ ವ್ಯಾಪ್ತಿಯು ಬಹುತೇಕವಾಗಿ ಕೃಷಿಯ ಮೇಲೆ ಅವಲಂಬಿತವಾಗಿದೆ. ಈ ಬಾರಿ ಸಾಕಷ್ಟು ಪ್ರಮಾಣದ ಮಳೆಯಾಗಿದ್ದರಿಂದ ನಾರಾಯಣಪೂರ ಮತ್ತು ಆಲಮಟ್ಟಿ ಜಲಾಶಯಗಳು ಭರ್ತಿಯಾಗಿವೆ. ರೈತರು ಬೆಳೆದಿರುವ ಸಜ್ಜೆ, ಶೇಂಗಾ, ಮೆಣಸಿನಕಾಯಿ, ಭತ್ತ ಸೇರಿ ಇನ್ನಿತರ ವಾಣಿಜ್ಯ ಬೆಳೆಗಳು ಸದ್ಯ ಫಲ ನೀಡುವ ಹಂತದಲ್ಲಿದ್ದು, ಸದರಿ ಬೆಳೆಗಳು ಸಂಪೂರ್ಣವಾಗಿ ರೈತರ ಕೈಗೆ ಬರಲು ನೀರಿನ ಅವಶ್ಯಕತೆ ಬಹಳಷ್ಟಿದೆ ಎಂದು ತಿಳಿಸಿದ್ದಾರೆ.
ಒಂದು ವೇಳೆ ನೀರಿನ ಅಭಾವ ಉಂಟಾದರೆ ಬೆಳೆಗಳು ಕೈತಪ್ಪುತ್ತವೆ. ಇದರಿಂದ ರೈತರು ಸಾಲದ ಸುಳಿಯಲ್ಲಿ ಸಿಕ್ಕಿಕೊಂಡು ಸಂಕಷ್ಟಕ್ಕೀಡಾಗುವ ಪರಿಸ್ಥಿತಿಯಿಂದ ತಮ್ಮ ಉಪ ಜೀವನಕ್ಕಾಗಿ ಕುಟುಂಬ ಸಮೇತವಾಗಿ ದೂರದ ನಗರ ಮತ್ತು ಪಟ್ಟಣಗಳಿಗೆ ವಲಸೆ ಹೋಗುವ ಸಂದರ್ಭ ಎದುರಾಗುತ್ತದೆ. ಕೃಷಿ ಕೂಲಿ ಕಾರ್ಮಿಕರು ಕೂಡ ಕಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹೇಳಿದ್ದಾರೆ.
ಕ್ಷೇತ್ರದ ರೈತರು ಹಾಗೂ ರೈತ ಸಂಘಟನೆಯವರು ಕಾಲುವೆಗೆ ನೀರು ಹರಿಸುವುದನ್ನು ವಿಸ್ತರಿಸುವಂತೆ ಒತ್ತಾಯಿಸಿ ಈಗಾಗಲೇ ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುತ್ತಾರೆ. ಕಾರಣ ರೈತರ ಹಿತ ರಕ್ಷಣೆಗಾಗಿ ಮತ್ತು ಕೂಲಿ ಕಾರ್ಮಿಕರ ಉಪಜೀವನಕ್ಕಾಗಿ ನೀರಾವರಿ ಸಲಹಾ ಸಮಿತಿ ಸಭೆಯನ್ನು ಶೀಘ್ರವಾಗಿ ಕರೆದು ರೈತರ ಹಿತ ಕಾಯುವ ನಿರ್ಣಯವನ್ನು ಕೈಗೊಳ್ಳಲು ಕ್ರಮವಹಿಸಬೇಕು ಎಂದು ಶಾಸಕ ಆರ್‌ವಿಎನ್ ಅವರು ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.


