“ಜೈ ಶರಣಬಸವೇಶ್ವರ” ಘೋಷಣೆಗಳ ನಡುವೆ ರಥೋತ್ಸವ ವಿಜೃಂಭಣೆ|ರುದ್ರಾಭಿಷೇಕ, ಪಣಿದಾಂಡು ಆಟಗಳಿಂದ ಉತ್ಸವಕ್ಕೆ ವಿಶೇಷ ಕಳೆ.
ಸುರಪುರ ಟೈಮ್ಸ್ ವಾರ್ತೆ
ಸುರಪುರ : ನಗರದ ಶೆಟ್ಟಿ ಓಣಿಯಲ್ಲಿರುವ ಶ್ರೀ ಶರಣಬಸವೇಶ್ವರ ದೇವಸ್ಥಾನದ ರಥೋತ್ಸವವು ಯುಗಾದಿ ಪಾಡ್ಯ ದಿನವಾದ ಗುರುವಾರ ಸಂಜೆ ಶ್ರದ್ಧಾ-ಭಕ್ತಿಯೊಂದಿಗೆ ಅದ್ಧೂರಿಯಾಗಿ ಜರುಗಿತು.
ರಥೋತ್ಸವದ ನಿಮಿತ್ತ ಬೆಳಿಗ್ಗೆ ದೇವಸ್ಥಾನದಲ್ಲಿ ಶರಣಬಸವೇಶ್ವರ ಮೂರ್ತಿಗೆ ಪುಷ್ಪ ಅಲಂಕಾರ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಭಾಗ್ಯವಂತ ಕೊಟ್ರಯ್ಯಸ್ವಾಮಿ ಮಠಪತಿ ಅವರು ರುದ್ರಾಭಿಷೇಕ ನೆರವೇರಿಸಿದರು. ಬಳಿಕ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಬೇವು ವಿತರಿಸಲಾಯಿತು.
ಸಂಜೆ ಸುಮಾರು ೫ ಗಂಟೆಗೆ ನಗರದ ೧೨ ಕೇರಿಯ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪಣಿದಾಂಡು ಆಟ ಹಾಗೂ ಭಕ್ತಿಗೀತೆಗಳ ಮೂಲಕ ಉತ್ಸವಕ್ಕೆ ವಿಶೇಷ ಕಳೆ ತಂದರು.
ಇನ್ನು ಸಂಜೆ ೬ ಗಂಟೆ ಸುಮಾರಿಗೆ ದೇವಸ್ಥಾನದಿಂದ ಪಾದಗಟ್ಟೆಯವರೆಗೆ ಶರಣಬಸವೇಶ್ವರರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. “ಜೈ ಶರಣಬಸವೇಶ್ವರ” ಘೋಷಣೆಗಳ ಮಧ್ಯೆ ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ಉತ್ತುತ್ತಿ, ಬಾಳೆಹಣ್ಣುಗಳನ್ನು ಅರ್ಪಿಸಿ ತಮ್ಮ ಭಕ್ತಿಭಾವವನ್ನು ವ್ಯಕ್ತಪಡಿಸಿದರು.
ಈ ರಥೋತ್ಸವದಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುನೀಲ್ ಸರಪಟ್ಟಣ್ಣ ಶೆಟ್ಟರು, ಚಂದ್ರಕಾಂತ ಕಳ್ಳಿಮನಿ, ಶರಣಯ್ಯಸ್ವಾಮಿ ಮಠಪತಿ, ವೀರೇಶ ಪಂಚಾಂಗಮಠ, ಸಂಗಯ್ಯಸ್ವಾಮಿ ಕಡ್ಲಪ್ಪ ಮಠ, ಕೊಟ್ರಯ್ಯಸ್ವಾಮಿ ಮಠಪತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

