ದಾಸಿಮಯ್ಯರ ತತ್ವಗಳು ಸಮಾಜಕ್ಕೆ ದಾರಿದೀಪ|ವಚನ ಸಾಹಿತ್ಯದಲ್ಲಿ ಇಂದಿನ ಸಮಸ್ಯೆಗಳಿಗೆ ಪರಿಹಾರ; ಮಂಜುನಾಥ ಚೆಟ್ಟಿ
ಸುರಪುರ ಟೈಮ್ಸ್ ವಾರ್ತೆ
ಸುರಪುರ : ಆದ್ಯ ವಚನಕಾರ ದೇವರ ದಾಸಿಮಯ್ಯ ಅವರು ಜಗದ ಪ್ರಥಮ ವಚನಕಾರ ಎನ್ನಿಸಿಕೊಂಡಿದ್ದಾರೆ. ಅವರ ಪ್ರತಿ ವಚನಗಳು ಜೀವನದ ಮೌಲ್ಯ, ಉತ್ತಮ ಬದುಕಿಗೆ ಸನ್ಮಾರ್ಗದ ಸಂದೇಶ ನೀಡುತ್ತವೆ. ಸ್ವಾಸ್ಥö್ಯ ಸಮಾಜಕ್ಕೆ ಅವರ ವಚನಗಳು ಪೂರಕವಾಗಿವೆ. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಉಪನ್ಯಾಸಕ ಮಂಜುನಾಥ ಚೆಟ್ಟಿ ರುಕ್ಮಾಪುರ ಹೇಳಿದರು.

ಇಲ್ಲಿಯ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಸೋಮವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ಸುರಪುರ ತಾಲೂಕಿನ ಮುದ್ನೂರು ಗ್ರಾಮದಲ್ಲಿ ಕ್ರಿಶ.1165 ರಲ್ಲಿ ಜನಿಸಿದ ದಾಸಿಮಯ್ಯ ವೃತ್ತಿಯಿಂದ ನೇಕಾರ. ಶಿವನ ಆರಾಧಕ. ಕೆಲಸವೇ ಅವರ ಪೂಜೆ. ಕಾಯಕದಲ್ಲಿ ಜೀವನ ಮೌಲ್ಯ ಕಂಡುಕೊಂಡು ವಚನಗಳ ಮೂಲಕ ಅವುಗಳನ್ನು ಜಗತ್ತಿಗೆ ಸಾರಿದರು.
178 ವಚನಗಳನ್ನು ರಾಮನಾಥಾ ಎಂಬ ಅಂಕಿತದಲ್ಲಿ ರಚಿಸಿದರು. ದುಗ್ಗಳೆ ಅವರ ಧರ್ಮಪತ್ನಿ. ಆದರ್ಶ ದಂಪತಿಗಳಾಗಿದ್ದ ಅವರು ಬದುಕಿನಲ್ಲಿ ದಾಂಪತ್ಯ ಜೀವನ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟರು. ದೇವರ ಮೇಲೆ ಭಕ್ತಿ ಮತ್ತು ನಿಷ್ಠೆ ಮುಖ್ಯ ಎಂದು ತಿಳಿಸಿ, ತಾವು ನೇಯ್ದ ಬಟ್ಟೆಯನ್ನು ಶಿವನಿಗೆ ಅರ್ಪಿಸಿ ಅಪೂರ್ವ ಭಕ್ತಿ ಮೆರೆದರು. ಜೀವನದಲ್ಲಿ ಕಾಯಕದ ಮಹತ್ವವನ್ನು ತಿಳಿಸಿ, ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯತೆ ಅಗತ್ಯವೆಂದು ಬೋಧಿಸಿದರು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಚ್.ಎ. ಸರಕಾವಸ್ ಮಾತನಾಡಿ, ಆದ್ಯ ವಚನಕಾರ ದೇವರ ದಾಸಿಮಯ್ಯ ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದರು. ಶರಣರು, ವಚನಕಾರರು, ಮಹಾತ್ಮರು ಸರ್ವ ಒಳಿಗಾಗಿ ಶ್ರಮಿಸಿದರು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ಇಂದಿನ ವಿಶ್ವದ ಸಮಸ್ಯೆಗಳಿಗೆ, ಸಾಮಾಜಿಕ ಪಿಡುಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರ ಇದೆ ಎಂದರು.
ಪಿಐ ಉಮೇಶ ನಾಯಕ, ಬಿಸಿಎಂ ಅಧಿಕಾರಿ ಯಂಕಣ್ಣ ಟಣಕೆದಾರ್, ದೇವಾಂಗ ಸಮಾಜದ ಅಧ್ಯಕ್ಷ ಶರಣಪ್ಪ ಗುಮ್ಮಾ, ಹಿರಿಯರಾದ ಮಲ್ಕಜಪ್ಪಾ ಮಿಟ್ಟಾ ವೇದಿಕೆಯಲ್ಲಿದ್ದರು. ಸಮಾಜದ ಗಿರಿಮಲ್ಲಪ್ಪ ಕೊಳ್ಳಿ, ನಿಂಗಣ್ಣ ರಾಯಚೂರಕರ್, ಬಸವರಾಜ ಹೊನ್ನಳ್ಳಿ, ನಾಗಪ್ಪ ಗುಮ್ಮಾ, ಸಂಗಣ್ಣ ಮಿಣಜಗಿ, ಚನ್ನಬಸಪ್ಪ ಚೆಟ್ಟಿ, ಬಸವರಾಜ ಬಡಗಾ, ದೇವಿಂದ್ರಪ್ಪ ಯಾಳಗಿ, ಶಾಂತಪ್ಪ ಮಿಣಜಿಗಿ, ಮಲ್ಕಪ್ಪ ಪರಚಂಡಿ, ರಾಜಶೇಖರ, ಚಂದ್ರಶೇಖರ ಚಿನ್ನಗುಡಿ ಸೇರಿ ಇತರರಿದ್ದರು. ಕಂದಾಯ ಇಲಾಖೆಯ ಅಶೋಕ ಸ್ವಾಗತಿಸಿದರು. ಚನ್ನಬಸವ ನಿರೂಪಿಸಿ ವಂದಿಸಿದರು.

