ನಶಾಮುಕ್ತ ಕ್ಯಾಂಪಸ್ ಅಭಿಯಾನಕ್ಕೆ ಭರ್ಜರಿ ಚಾಲನೆ|ಎಬಿವಿಪಿ ಲಿಂಗಸುಗೂರು ವತಿಯಿಂದ ಜಾಗೃತಿ ಅಭಿಯಾನ | ಡಿವೈಎಸ್‌ಪಿ ದತ್ತಾತ್ರೇಯ ಕಾರ್ನಾಡ್ ಪೋಸ್ಟರ್ ಬಿಡುಗಡೆ
ಸುರಪುರ ಟೈಮ್ಸ್ ವಾರ್ತೆ
ಲಿಂಗಸುಗೂರು : ಯುವಜನರಲ್ಲಿ ಹೆಚ್ಚುತ್ತಿರುವ ನಶಾ ಪದಾರ್ಥಗಳ ಬಳಕೆಯನ್ನು ತಡೆಗಟ್ಟುವ ಉದ್ದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಲಿಂಗಸುಗೂರು ಘಟಕದ ವತಿಯಿಂದ “ನಶಾಮುಕ್ತ ಕ್ಯಾಂಪಸ್” ಅಭಿಯಾನಕ್ಕೆ ಭರ್ಜರಿ ಚಾಲನೆ ನೀಡಲಾಯಿತು.
ಈ ಅಭಿಯಾನದ ಅಂಗವಾಗಿ ಅಲ್ಲಮಪ್ರಭು ನರ್ಸಿಂಗ್ ಹೋಮ್ ಮತ್ತು ಕಾಲೇಜ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಶ್ರೀ ದತ್ತಾತ್ರೇಯ ಕಾರ್ನಾಡ್ ಅವರು ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನವು ಭವಿಷ್ಯದ ಆಧಾರವಾಗಿದ್ದು, ಈ ಹಂತದಲ್ಲಿ ನಶಾ ಪದಾರ್ಥಗಳಿಗೆ ಒಳಗಾದರೆ ಜೀವನದ ದಿಕ್ಕು ತಪ್ಪುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು. ನಶಾ ಪದಾರ್ಥಗಳು ವ್ಯಕ್ತಿ ಮಾತ್ರವಲ್ಲದೆ ಕುಟುಂಬ ಮತ್ತು ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ ಎಂದು ಹೇಳಿದರು. ವಿದ್ಯಾರ್ಥಿಗಳು ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಂಡು ದುಷ್ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ತರುಣಗೌಡ ಎಂ ಪಾಟೀಲ್ ಅವರು ಮಾತನಾಡಿ, ವಿದ್ಯಾರ್ಥಿಗಳನ್ನು ನಶಾಮುಕ್ತವಾಗಿಡುವುದು ದೇಶದ ಭವಿಷ್ಯವನ್ನು ಬಲಪಡಿಸುವ ಮಹತ್ವದ ಕಾರ್ಯವಾಗಿದೆ ಎಂದು ತಿಳಿಸಿದರು. ಇಂತಹ ಅಭಿಯಾನಗಳು ಯುವಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿ ಆಗುತ್ತವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಬಸವರಾಜ, ಕಾರ್ಯಕರ್ತ ಅಭಿಷೇಕ್ ನಾಯಕ ಸೇರಿದಂತೆ ಎಬಿವಿಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಅಲ್ಲಮಪ್ರಭು ನರ್ಸಿಂಗ್ ಹೋಮ್ ಮತ್ತು ಕಾಲೇಜ್‌ನ ಆಡಳಿತ ಮಂಡಳಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ನಶಾಮುಕ್ತ ಕ್ಯಾಂಪಸ್ ನಿರ್ಮಾಣಕ್ಕೆ ಕೈಜೋಡಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಎಬಿವಿಪಿ ವತಿಯಿಂದ ಮುಂದಿನ ದಿನಗಳಲ್ಲಿ ವಿವಿಧ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ಜಾಥಾ, ಉಪನ್ಯಾಸಗಳು ಮತ್ತು ಶಪಥ ಸ್ವೀಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಭಿಯಾನವನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.

