ನಗನೂರಿನಲ್ಲಿ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ ಪುರಾಣಕ್ಕೆ ಚಾಲನೆ| 179ನೇ ಜಾತ್ರಾ ಮಹೋತ್ಸವ ಅಂಗವಾಗಿ ಭಕ್ತಿ ಸಂಭ್ರಮ | ಪುರಾಣದಿಂದ ಮನಶಾಂತಿ, ಆಧ್ಯಾತ್ಮಿಕ ಬೆಳಕು: ಸೂರ್ಯಕಾಂತಯ್ಯ ಶಾಸ್ತ್ರಿಗಳು


ಸುರಪುರ ಟೈಮ್ಸ್ ವಾರ್ತೆ ಕೆಂಭಾವಿ:ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಆರಾಧ್ಯ ದೈವ ಮಹಾ ದಾಸೋಹಿ ಶ್ರೀ ಶರಣಬಸವೇಶ್ವರರ 179ನೇ ಜಾತ್ರಾ ಮಹೋತ್ಸವದ ಅಂಗವಾಗಿ ಪುರಾಣ ಕಾರ್ಯಕ್ರಮ ಭಕ್ತಿಭಾವದಿಂದ ಆರಂಭಗೊಂಡಿತು.
ಪುರಾಣಿಕ ವೆ.ಮೂ. ಸೂರ್ಯಕಾಂತಯ್ಯ ಶಾಸ್ತ್ರಿಗಳು ದುತ್ತರಗಾಂವ್ (ಕಲಬುರಗಿ) ಮಾತನಾಡಿ, ಪುರಾಣ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಉಲ್ಲಾಸ ದೊರೆಯುತ್ತದೆ ಎಂದು ಹೇಳಿದರು. ಭಗವಂತನ ಕೃಪೆಗೆ ನಿರ್ಮಲ ಭಕ್ತಿ ಅವಶ್ಯಕವಾಗಿದ್ದು, ಸಂತಸದ ಜೀವನಕ್ಕಾಗಿ ಗುರುವಿನ ಮಾರ್ಗದರ್ಶನ ಮುಖ್ಯ ಎಂದರು.
ಪುರಾಣವೆಂದರೆ ಜನರನ್ನು ಭಕ್ತಿ ಮಾರ್ಗದಲ್ಲಿ ನಡೆಸುವುದರ ಜೊತೆಗೆ ಅವರಲ್ಲಿರುವ ದುರ್ಗುಣಗಳನ್ನು ದೂರ ಮಾಡುವ ಶಕ್ತಿ ಹೊಂದಿದೆ. ಪುರಾಣ ಶ್ರವಣದಿಂದ ಮಾನಸಿಕ ಸಮತೋಲನ ವೃದ್ಧಿಯಾಗುವುದಲ್ಲದೇ, ಆಧ್ಯಾತ್ಮಿಕ ಚಿಂತನೆಗೆ ಪ್ರೇರಣೆ ಸಿಗುತ್ತದೆ ಎಂದು ಹೇಳಿದರು.


ಭಗವಂತನು ಯಾವತ್ತೂ ಅಂತರಂಗದ ಭಕ್ತಿಗೆ ಒಲಿಯುತ್ತಾನೆ. ಆದ್ದರಿಂದ ಕುಟುಂಬದಿಂದಲೇ ಉತ್ತಮ ಸಂಸ್ಕಾರಗಳನ್ನು ಬೆಳೆಸುವುದು ಅಗತ್ಯವಾಗಿದೆ. ಪುರಾಣ ಪ್ರವಚನಗಳು ಪ್ರತಿಯೊಬ್ಬರ ಜೀವನದಲ್ಲಿ ಬೆಳಕು ಮೂಡಿಸಿ, ಮಾನವೀಯ ಮೌಲ್ಯಗಳನ್ನು ವೃದ್ಧಿಗೊಳಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಶರಣರ ಹಾಗೂ ಸಂತರ ಪುಣ್ಯಕಥೆಗಳು ಮಾನವ ಜೀವನವನ್ನು ಸಾರ್ಥಕಗೊಳಿಸುವ ಮಾರ್ಗವನ್ನು ತೋರಿಸುತ್ತವೆ. ಇಂತಹ ಪವಿತ್ರ ಕಥೆಗಳ ಸಾರವನ್ನು ಪ್ರತಿಯೊಬ್ಬರೂ ಆಲಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಷ.ಬ್ರ. ಶ್ರೀ ಸೂಗೂರೇಶ್ವರ ಶಿವಾಚಾರ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ಶರಣಬಸವೇಶ್ವರ ದಾಸೋಹ ಮಠದ ಪೀಠಾಧಿಪತಿ ಪೂಜ್ಯ ಶರಣಪ್ಪ ಶರಣರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.


ಈ ಸಂದರ್ಭದಲ್ಲಿ ಆನಂದಸ್ವಾಮಿ ಚಾಮನಾಳ, ಜಿಪಂ ಮಾಜಿ ಉಪಾಧ್ಯಕ್ಷ ಶಂಕ್ರಣ್ಣ ವಣಿಕ್ಯಾಳ, ಮುಖಂಡರಾದ ಸಿದ್ದಣ್ಣ ಸಾಹು, ವೀರಯ್ಯಸ್ವಾಮಿ ಸ್ಥಾವರಮಠ, ಸದಾಶಿವರೆಡ್ಡಿ ದೇಸಾಯಿ, ಭೋಜಪ್ಪಗೌಡ ಪೊಲೀಸ್ ಪಾಟೀಲ, ಶಾಂತನಂದ, ಗೊಲ್ಲಾಳಪ್ಪ ತಿಪ್ಪಶೆಟ್ಟಿ, ಶಿವಶಂಕರ ತಿಪ್ಪಶೆಟ್ಟಿ, ಹಳ್ಳೆಪ್ಪ ಹವಾಲ್ದಾರ, ರಾಮಣ್ಣ ದೇಶಪಾಂಡೆ, ಪ್ರಕಾಶಬಾಬು ಪೊಲೀಸ್ ಪಾಟೀಲ, ರಾಹುಸಾಬ ದೇಸಾಯಿ, ಚನ್ನಾರೆಡ್ಡಿ ದೇಸಾಯಿ, ಗುರಣ್ಣ ಸಾಹು ಚಾಮನಾಳ ಸೇರಿದಂತೆ ನಗನೂರ, ಖಾನಾಪೂರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.
ಜಗದೀಶ ಶರಣರು ಪುರಾಣ ವಾಚಿಸಿದರು. ಶ್ರೀಮಂತ ತಿಪ್ಪಶೆಟ್ಟಿ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *

error: Content is protected !!