ವಿಕಲಚೇತನರ ಕುಂದುಕೊರತೆ ಸಭೆ|ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಿರಿ: ಬಸವರಾಜ ಸಜ್ಜನ್
ಸುರಪುರ ಟೈಮ್ಸ್ ವಾರ್ತೆ
ಸುರಪುರ: ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಕಲ್ಯಾಣಕಾರಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸಮರ್ಪಕ ಸದ್ಬಳಕೆ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಹೇಳಿದರು.

ನಗರದ ತಾಲೂಕು ಪಂಚಾಯತ್ ಕಚೇರಿಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ವಿಕಲಚೇತನರ ಕುಂದುಕೊರತೆ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ವಿಕಲಚೇತನರ ಜೀವನಮಟ್ಟವನ್ನು ಸುಧಾರಿಸಲು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.
2025ನೇ ಸಾಲಿನಲ್ಲಿ ವಿಕಲಚೇತನರಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು ₹800ರಿಂದ ₹2000ಕ್ಕೆ ಹೆಚ್ಚಿಸಲಾಗಿದ್ದು, ಇದು ಅವರ ಆರ್ಥಿಕ ಸ್ಥಿರತೆಗೆ ನೆರವಾಗಲಿದೆ ಎಂದರು. ಇದರೊಂದಿಗೆ ದ್ವಿಚಕ್ರ ವಾಹನ ವಿತರಣೆ, ಶಿಶುಪಾಲನಾ ಭತ್ಯೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ಸೇರಿದಂತೆ ಹಲವು ಹೊಸ ಯೋಜನೆಗಳು ಜಾರಿಯಲ್ಲಿದ್ದು, ಈ ಎಲ್ಲ ಸೌಲಭ್ಯಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇನ್ನಷ್ಟು ಮಾತನಾಡಿದ ಅವರು, ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ವ್ಯವಸ್ಥೆ ಇರುವುದರಿಂದ ವಿಕಲಚೇತನರು ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳಬಹುದು. ಸ್ವಯಂ ಉದ್ಯೋಗ ಆರಂಭಿಸಲು ಬಡ್ಡಿರಹಿತ ಸಾಲ ಸೌಲಭ್ಯಗಳು ಲಭ್ಯವಿದ್ದು, ಇದನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂದು ಹೇಳಿದರು.

ಪ್ರತಿ ಗ್ರಾಮ ಪಂಚಾಯತ್ ಸೇರಿದಂತೆ ವಿವಿಧ ಇಲಾಖೆಗಳಲ್ಲಿಯೂ ಶೇ.5ರಷ್ಟು ಅನುದಾನ ವಿಕಲಚೇತನರ ಅಭಿವೃದ್ಧಿಗೆ ಮೀಸಲಾಗಿರುತ್ತದೆ. ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡರೆ ಜೀವನಮಟ್ಟವನ್ನು ಸುಧಾರಿಸಬಹುದು. ಸಮಾಜದಲ್ಲಿ ಯಾವುದೇ ಹೀನಮನೋಭಾವವಿಲ್ಲದೆ ಸಾಮಾನ್ಯರಂತೆ ಬದುಕಿ ಸಾಧನೆ ಸಾಧಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ವಿಕಲಚೇತನರು ತಮ್ಮ ಕುಂದುಕೊರತೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಮೂಲಸೌಕರ್ಯ, ಸೌಲಭ್ಯಗಳ ಲಭ್ಯತೆ, ಅನುದಾನ ವಿತರಣೆಯಲ್ಲಿ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಿತು. ಅಧಿಕಾರಿಗಳು ಸಮಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಚೇರಿ ವ್ಯವಸ್ಥಾಪಕ ನಾಗಪ್ಪ ಪಾಟೀಲ, ನೀತಿ ಮತ್ತು ವಕಾಲತ್ತು ವಿಭಾಗದ ಮುಖ್ಯಸ್ಥ ನಾಗಪ್ಪ ಅವಂಟಿ, ಎಂ.ಆರ್.ಬಿ. ಮಾಳಪ್ಪ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಭೆಗೆ ಎಂ.ಆರ್.ಬಿ. ಮಾಳಪ್ಪ ಪೂಜಾರಿ ಸ್ವಾಗತಿಸಿದರು. ಬಸವರಾಜ ಪೂಜಾರಿ ನಿರೂಪಣೆ ನಡೆಸಿದರು. ಶರಣಪ್ಪ ಬಡಿಗೇರ ವಂದಿಸಿದರು.


