ಭಕ್ತರ ಜಯಘೋಷಗಳ ನಡುವೆ ವೈಭವದ ಹಳ್ಳೀರಾಯ ರಥೋತ್ಸವ|ಕೆಂಭಾವಿ ಸಮೀಪದ ಪರಸನಹಳ್ಳಿ ಗ್ರಾಮದಲ್ಲಿ ಐತಿಹಾಸಿಕ ಜಾತ್ರಾ ಸಂಭ್ರಮ.

ಸುರಪುರ ಟೈಮ್ಸ್ ವಾರ್ತೆ
ಕೆಂಭಾವಿ: ಪುರಸಭೆ ವ್ಯಾಪ್ತಿಯ ಪರಸನಹಳ್ಳಿ ಗ್ರಾಮದಲ್ಲಿ ಐತಿಹಾಸಿಕ ಶ್ರೀ ವರಹಳ್ಳೀರಾಯನ ಜಾತ್ರಾ ಉತ್ಸವದ ಅಂಗವಾಗಿ ಶುಕ್ರವಾರ ಭಕ್ತರ ಜಯಘೋಷಗಳ ನಡುವೆ ಭವ್ಯವಾದ ರಥೋತ್ಸವ ಜರುಗಿತು.
ಜಾತ್ರೆಯ ಅಂಗವಾಗಿ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ಅರ್ಚಕ ಗುತ್ತಣ್ಣ ಪೂಜಾರಿ ಅವರ ನೇತೃತ್ವದಲ್ಲಿ ಪೂಜೆ, ಅಭಿಷೇಕ, ಮಹಾನೈವೇದ್ಯ ಹಾಗೂ ವೇದಘೋಷ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಸಂಜೆ ವೇಳೆ ಪಲ್ಲಕ್ಕಿಯಲ್ಲಿ ಶ್ರೀ ವರಹಳ್ಳೀರಾಯ, ರಾಯಮಾನ್ಯ ಮತ್ತು ಜಟ್ಟಿಂಗರಾಯನ ಉತ್ಸವ ಮೂರ್ತಿಗಳ ಮೆರವಣಿಗೆ ನಡೆದ ಬಳಿಕ ಶೃಂಗಾರಗೊಂಡ ರಥದಲ್ಲಿ ಶ್ರೀ ಹಳ್ಳೀರಾಯನ ಉತ್ಸವ ಮೂರ್ತಿಯನ್ನು ಏರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರ ಘೋಷಣೆಗಳ ಮಧ್ಯೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಗ್ರಾಮದ ಸಮೀಪದ ಹಳ್ಳದ ದಂಡೆಯಲ್ಲಿರುವ ಪಾದಗಟ್ಟೆಯವರೆಗೆ ರಥೋತ್ಸವ ಸಾಗಿದ್ದು, ಅಲ್ಲಿ ಪೂಜೆ ಸಲ್ಲಿಸಿದ ನಂತರ ರಥವು ಮರಳಿ ತನ್ನ ಸ್ಥಳಕ್ಕೆ ತಲುಪಿತು. ಬಳಿಕ ಭಕ್ತರು ತೇರಿಗೆ ಹಿಡಿಗಾಯಿ ಒಡೆದು ತಮ್ಮ ಹರಕೆ ತೀರಿಸಿದರು.
ರಥೋತ್ಸವದ ವೇಳೆ “ಶ್ರೀ ವರಹಳ್ಳೀರಾಯ ಮಹಾರಾಜ ಕಿ ಜೈ” ಎಂಬ ಘೋಷಣೆಗಳು ಮುಗಿಲು ಮುಟ್ಟಿದವು. ರಥದ ಹಿಂದೆ ನೂರಾರು ಸುಮಂಗಲಿಯರು ಕಳಸ ಹೊತ್ತು ಪಾದಗಟ್ಟೆಯವರೆಗೆ ಹೆಜ್ಜೆ ಹಾಕಿದ ದೃಶ್ಯ ವಿಶೇಷವಾಗಿತ್ತು.
 ವಿಶೇಷತೆ: ಬೇವು-ಬೆಲ್ಲ ವಿತರಣೆ
ಯುಗಾದಿ ಹಬ್ಬದ ಸಂಭ್ರಮದ ಜೊತೆಗೆ ಈ ಗ್ರಾಮದಲ್ಲಿ ರಥೋತ್ಸವದ ಸಂದರ್ಭದಲ್ಲಿಯೂ ಮನೆಮನೆಗಳಲ್ಲಿ ಬೇವು-ಬೆಲ್ಲ ನೈವೇದ್ಯ ಮಾಡಿ ಜನತೆಗೆ ವಿತರಿಸುವ ಸಂಪ್ರದಾಯ ವಿಶೇಷವಾಗಿದೆ ಎಂದು ಗ್ರಾಮದ ಹಳ್ಳೆಪ್ಪಗೌಡ ಪೊಲೀಸ್ ಪಾಟೀಲ ತಿಳಿಸಿದ್ದಾರೆ.
ಈ ದೇವಸ್ಥಾನ ಹಲವು ವರ್ಷಗಳ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಪ್ರತಿವರ್ಷ ನಡೆಯುವ ಈ ಜಾತ್ರೆಗೆ ನೂರಾರು ಭಕ್ತರು ಆಗಮಿಸಿ ತಮ್ಮ ಹರಕೆಗಳನ್ನು ತೀರಿಸುವುದು ವಾಡಿಕೆಯಾಗಿದೆ ಎಂದು ಇತಿಹಾಸ ಸಂಶೋಧಕ ನಿಂಗನಗೌಡ ದೇಸಾಯಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!