ಹಿಂಗಾರು ಹಂಗಾಮಿಗೆ ಕಾಲುವೆ ನೀರು ಅವಧಿ ವಿಸ್ತರಣೆ|ರೈತರ ಬೇಡಿಕೆಗೆ ಸ್ಪಂದನೆ – ಏಪ್ರಿಲ್ 4ರಿಂದ 7ರವರೆಗೆ ನೀರು ಪೂರೈಕೆ ಮುಂದುವರಿಕೆ.
ಸುರಪುರ ಟೈಮ್ಸ್ ವಾರ್ತೆ
ಸುರಪುರ;2025-26ನೇ ಸಾಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಹಿಂಗಾರು ಹಂಗಾಮಿಗೆ ಕಾಲುವೆ ಜಾಲಗಳಿಗೆ ನೀರು ಹರಿಸುವ ಅವಧಿಯನ್ನು ವಿಸ್ತರಿಸಲಾಗಿದೆ.
ದಿನಾಂಕ 14.11.2025 ರಂದು ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ, 02.12.2025 ರಿಂದ 03.04.2026ರವರೆಗೆ ಕಾಲುವೆಗಳಿಗೆ ನೀರು ಹರಿಸಲಾಗುತ್ತಿತ್ತು. ಆದರೆ, ರೈತರು ಬೆಳೆದಿರುವ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿರುವ ಹಿನ್ನೆಲೆಯಲ್ಲಿ ನೀರಿನ ಅಗತ್ಯತೆ ಹೆಚ್ಚಾಗಿದೆ ಎಂದು ರೈತ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಮನವಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ, ಲಭ್ಯವಿರುವ ನೀರಿನ ಪ್ರಮಾಣವನ್ನು ಪರಿಶೀಲಿಸಿ, ರೈತರ ಹಿತದೃಷ್ಟಿಯಿಂದ 04.04.2026 ರಿಂದ 07.04.2026ರವರೆಗೆ ಕಾಲುವೆ ಜಾಲಗಳಿಗೆ ನೀರು ಹರಿಸಲು ಅವಧಿಯನ್ನು ವಿಸ್ತರಿಸಲು ಅನುಮೋದನೆ ನೀಡಲಾಗಿದೆ.
ಉಳಿದಿರುವ ನೀರಿನ ಲಭ್ಯತೆಯ ಆಧಾರದಲ್ಲಿ ದಿನಕ್ಕೆ ಸುಮಾರು 1 ಟಿಎಂಸಿ ದರದಲ್ಲಿ ನೀರು ಬಿಡಲಾಗುತ್ತದೆ.

ಯೋಜನಾ ವ್ಯಾಪ್ತಿಯ ಎಲ್ಲಾ ನೀರಾವರಿ ಅಧಿಕಾರಿಗಳಿಗೆ 01.04.2026 ರಿಂದ 07.04.2026ರವರೆಗೆ ಕಾಲುವೆಗಳಲ್ಲಿ ನೀರು ಸಮರ್ಪಕವಾಗಿ ಹರಿಸಲು ಹಾಗೂ ಯಾವುದೇ ನೀರು ವ್ಯರ್ಥವಾಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

