ಡಾ. ಜಗಜೀವನ ರಾಮ್ ಜಯಂತಿ ಅಂಗವಾಗಿ ಪೂರ್ವಭಾವಿ ಸಭೆ|ಮುಖಂಡರ ಸಲಹೆ-ಸೂಚನೆಗಳು | ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ, ಮೆರವಣಿಗೆ-ಉಪನ್ಯಾಸ ಕಾರ್ಯಕ್ರಮ
ಸುರಪುರ ಟೈಮ್ಸ್ ವಾರ್ತೆ
ಸುರಪುರ:ಮಾಜಿ ಉಪ ಪ್ರಧಾನಿ ಡಾ. ಜಗಜೀವನ ರಾಮ್ ಅವರ ಜಯಂತಿಯನ್ನು ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಪೂರ್ವಭಾವಿ ಸಭೆ ತಹಸೀಲ್ದಾರ್ ಕಚೇರಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ ತಹಸೀಲ್ದಾರ್ ಹೆಚ್.ಎ. ಸರಕಾವಸ್ ಮಾತನಾಡಿ, ಏಪ್ರಿಲ್ 5ರಂದು ತಾಲೂಕಿನ ಎಲ್ಲಾ ಶಾಲೆಗಳು, ಕಾಲೇಜುಗಳು, ವಸತಿ ನಿಲಯಗಳು, ಅಂಗನವಾಡಿಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಜಯಂತಿಯನ್ನು ಕಡ್ಡಾಯವಾಗಿ ಆಚರಿಸುವಂತೆ ಸೂಚಿಸಿದರು.

ತಾಲೂಕು ಆಡಳಿತದ ವತಿಯಿಂದ ಅದೇ ದಿನ ಬೆಳಿಗ್ಗೆ ಭಾವಚಿತ್ರದ ಮೆರವಣಿಗೆ ಆಯೋಜಿಸಲಾಗಿದ್ದು, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗಿ ಮಹಾತ್ಮ ಗಾಂಧಿ ವೃತ್ತ, ದರ್ಬಾರ್ ರಸ್ತೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಚೌಕ, ಶ್ರೀ ವೇಣುಗೋಪಾಲ್ ಸ್ವಾಮಿ ದೇವಸ್ಥಾನ, ವಾಲ್ಮೀಕಿ ಚೌಕ್ ಮಾರ್ಗವಾಗಿ ತಹಸೀಲ್ದಾರ್ ಕಚೇರಿವರೆಗೆ ಸಾಗಲಿದೆ. ಮೆರವಣಿಗೆಯ ನಂತರ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.

ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಆರ್. ವಿನಾಯಕ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ಸಮಾಜ ಕಲ್ಯಾಣಾಧಿಕಾರಿ ಮಹಮ್ಮದ್ ಸಲೀಂ, ಪಿಡಬ್ಲ್ಯುಡಿ ಎಇಇ ಎಸ್.ಜಿ. ಪಾಟೀಲ್, ಸಿಡಿಪಿಒ ಲಾಲಸಾಬ ಪೀರಾಪುರ, ಡಾ. ಸುರೇಶ್, ಪಿಎಸ್‌ಐ ಸಿದ್ದಣ್ಣ ಯಡ್ರಾಮಿ, ನಗರಸಭೆಯ ಮೈನುದೀನ್, ಅಬಕಾರಿ ಇಲಾಖೆಯ ಅನಿಲ್ ಕುಮಾರ್, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಸಭೆಯಲ್ಲಿ ಮಾತನಾಡಿದ ಮುಖಂಡರಾದ ಶಿವಮೊನಯ್ಯ ನಾಯಕ, ಯಲ್ಲಪ್ಪ ಹುಲಿಕಲ್, ದಾನಪ್ಪ ಲಕ್ಷ್ಮಿಪುರ, ಬಸವರಾಜ ಹಾದಿಮನಿ, ಹಣಮಂತ ಜಿಲ್ಲವ್, ಶರಣಪ್ಪ ಅನ್ನೂರ, ಮಲ್ಲಿಕಾರ್ಜುನ ಮಂದಾಲೆ, ಬಸವರಾಜ ಕವಡಿಮಟ್ಟಿ, ನಿಂಗಣ್ಣ ದಿವಳಗುಡ್ಡ, ಯಮನಪ್ಪ ಕಟ್ಟಿಮನಿ, ಅದಪ್ಪ ಸೇರಿದಂತೆ ಹಲವರು ಮೆರವಣಿಗೆ ಮಾರ್ಗದಲ್ಲಿನ ಗುಂಡಿಗಳನ್ನು ಮುಚ್ಚುವುದು, ನಗರದಲ್ಲಿನ ವೃತ್ತಗಳಲ್ಲಿ ಸ್ವಚ್ಛತೆ ಮತ್ತು ದೀಪಾಲಂಕಾರ ಮಾಡುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಜೊತೆಗೆ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಒತ್ತಾಯಿಸಿದರು.

